ಅದ್ಭುತ ವ್ಯಕ್ತಿ, ಅವರ ಕಾರ್ಯದ ಬಗ್ಗೆ ಗೌರವವಿದೆ: ಸ್ಟ್ಯಾನ್ ಸ್ವಾಮಿ ಬಗ್ಗೆ ಬಾಂಬೆ ಹೈಕೋರ್ಟ್ ಪ್ರತಿಕ್ರಿಯೆ

ಮುಂಬೈ, ಜು.19: ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಆರೋಪಿಯಾಗಿದ್ದ ದಿವಂಗತ ಸ್ಟ್ಯಾನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಅವರ ಮರಣಾನಂತರ ಕೈಗೊಂಡಿರುವ ಬಾಂಬೆ ಹೈಕೋರ್ಟ್, ಸ್ಟ್ಯಾನ್ ಸ್ವಾಮಿ ಓರ್ವ ಅದ್ಭುತ ವ್ಯಕ್ತಿಯಾಗಿದ್ದು ಅವರ ಕಾರ್ಯದ ಬಗ್ಗೆ ನ್ಯಾಯಾಲಯಕ್ಕೆ ಅಪಾರ ಗೌರವವಿದೆ ಎಂದಿದೆ.
ಸಾಮಾನ್ಯವಾಗಿ ನಮಗೆ ಸಮಯವಿರುವುದಿಲ್ಲ. ಆದರೆ ಸ್ವಾಮಿಯ ಕಾರ್ಯವನ್ನು ಗಮನಿಸಿದ್ದೇನೆ. ಅದು ಅತ್ಯಂತ ಘನತೆಯೆತ್ತ ರೀತಿಯಲ್ಲಿತ್ತು. ಅವರೊಬ್ಬ ಅದ್ಬುತ ವ್ಯಕ್ತಿ. ಸಮಾಜಕ್ಕೆ ಅವರು ಅಪಾರ ಸೇವೆ ನೀಡಿದ್ದು ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಕಾನೂನಾತ್ಮಕವಾಗಿ, ಅವರ ವಿರುದ್ಧ ಇರುವ ಪ್ರಕರಣ ಬೇರೆ ವಿಷಯ’ ಎಂದು ಹೈಕೋರ್ಟ್ ನ್ಯಾಯಪೀಠದ ನ್ಯಾಯಾಧೀಶ ಎಸ್ಎಸ್ ಶಿಂಧೆ ಹೇಳಿದ್ದಾರೆ.
ಸ್ವಾಮಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜುಲೈ 5ರಂದು ಇದೇ ನ್ಯಾಯಪೀಠ ನಡೆಸುತ್ತಿದ್ದಾಗ, 84 ವರ್ಷದ ಸ್ವಾಮಿ ಹೃದಯಾಘಾತದಿಂದ ಮೃತಪಟ್ಟ ಮಾಹಿತಿ ದೊರಕಿತ್ತು. ಸ್ವಾಮಿಯ ಮರಣದ ಬಳಿಕ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಹಾಗೂ ನ್ಯಾಯಾಂಗದ ವಿರುದ್ಧ ಕೇಳಿಬಂದ ಟೀಕೆಯ ಬಗ್ಗೆಯೂ ನ್ಯಾಯಪೀಠ ಪ್ರಸ್ತಾವಿಸಿತು. ಹಲವು ಪ್ರಕರಣಗಳಲ್ಲಿ ವಿಚಾರಣಾಧೀನ ಆರೋಪಿಗಳು ವಿಚಾರಣಾ ಪ್ರಕ್ರಿಯೆ ಆರಂಭವಾಗುವುದನ್ನೇ ಕಾಯುತ್ತಾ ಜೈಲಿನಲ್ಲಿ ಕುಗ್ಗಿಹೋಗುತ್ತಿರುವ ಬಗ್ಗೆ ವಿಷಾದವಿದೆ ಎಂದು ನ್ಯಾಯಪೀಠ ಹೇಳಿದೆ.
ಸ್ವಾಮಿ ಹಾಗೂ ಸಹ ಆರೋಪಿಗಳ ಜಾಮೀನು ಅರ್ಜಿಯ ಬಗ್ಗೆ ಅತ್ಯಂತ ನ್ಯಾಯಸಮ್ಮತ ತೀರ್ಪು ಹೊರಬೀಳಬೇಕೆಂದು ನಿರ್ಧರಿಸಿದ್ದೆವು ಎಂದ ನ್ಯಾಯಪೀಠ, ನೀವು ಮೇ 28ರಂದು ವೈದ್ಯಕೀಯ ನೆಲೆಯಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಿರಿ. ನಿಮ್ಮ ಎಲ್ಲಾ ಕೋರಿಕೆಯನ್ನೂ ನಾವು ಒಪ್ಪಿದ್ದೆವು ಎಂದು ಸ್ವಾಮಿಯ ವಕೀಲ ಮಿಹಿರ್ ದೇಸಾಯಿಯನ್ನುದ್ದೇಶಿಸಿ ನ್ಯಾಯಪೀಠ ಹೇಳಿದೆ. ಈ ವಿಷಯದಲ್ಲಿ ಈ ಕೋರ್ಟ್ ನ ಬಗ್ಗೆ ಯಾವುದೇ ಆಕ್ಷೇಪವಿಲ್ಲ ಎಂದು ನೀವು ಹೇಳಿರುವ ದಾಖಲೆಯಿದೆ. ಇದೇ ನ್ಯಾಯಾಲಯ ಸಹ ಆರೋಪಿ ವರವರ ರಾವ್ ಗೆ ತೀವ್ರ ಆಕ್ಷೇಪದ ಮಧ್ಯೆಯೂ ಜಾಮೀನು ಮಂಜೂರುಗೊಳಿಸಿರುವುದನ್ನು ಯಾರೂ ಪ್ರಸ್ತಾವಿಸುವುದಿಲ್ಲ.
ಮಾನವೀಯ ನೆಲೆಯಲ್ಲಿ ರಾವ್ ರನ್ನು ಭೇಟಿಯಾಗಲು ಕುಟುಂಬದ ಸದಸ್ಯರಿಗೆ ನಾವು ಅವಕಾಶ ನೀಡಿದ್ದೆವು. ಇನ್ನೊಂದು ಪ್ರಕರಣದಲ್ಲಿ (ಹನಿ ಬಾಬು), ಅವರು ಇಚ್ಛಿಸಿದ ಆಸ್ಪತ್ರೆಗೆ ದಾಖಲಿಸಲು ಅನುವು ಮಾಡಿಕೊಟ್ಟಿದ್ದೇವೆ. ಇದು (ಕಸ್ಟಡಿಯಲ್ಲಿ ಸ್ವಾಮಿಯ ಸಾವು ) ಸಂಭವಿಸುವ ಬಗ್ಗೆ ನಾವು ನಿರೀಕ್ಷಿಸಿರಲಿಲ್ಲ. ನಮ್ಮ ಮನಸ್ಸಿನಲ್ಲಿ ಏನಿತ್ತು ಎಂದು ಈಗ ಹೇಳಲು ಆಗುವುದಿಲ್ಲ ಎಂದು ನ್ಯಾಯಪೀಠ ಹೇಳಿತು. ಸ್ವಾಮಿಯ ಪ್ರಕರಣದಲ್ಲಿ ಹೈಕೋರ್ಟ್ನ ವಿವಿಧ ನ್ಯಾಯಪೀಠದ ಕಾರ್ಯನಿರ್ವಹಣೆಯ ಬಗ್ಗೆ ತನಗೆ ಅತ್ಯಂತ ತೃಪ್ತಿಯಿದೆ ಎಂದು ನ್ಯಾಯವಾದಿ ದೇಸಾಯಿ ಹೇಳಿದ್ದರು.
ಸ್ವಾಮಿಯ ಕಸ್ಟಡಿ ಸಾವಿನ ಪ್ರಕರಣದ ಬಗ್ಗೆ ನಡೆಯುತ್ತಿರುವ ಮ್ಯಾಜಿಸ್ಟೇಟ್ ಮಟ್ಟದ ತನಿಖೆಯಲ್ಲಿ , ಸ್ವಾಮಿಯ ಸಹಚರ ಹಾಗೂ ಪಾದ್ರಿ ಫ್ರೇಝರ್ ಮಸ್ಕರೇನ್ಹಸ್ ರಿಗೂ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಹಾಗೂ ಈ ವಿಚಾರಣೆ ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿಯ ಮಾರ್ಗಸೂಚಿ ಪ್ರಕಾರ ನಡೆಯಬೇಕು. ಅಲ್ಲದೆ, ತನಿಖೆಯ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸುವಂತೆ ಸೂಚಿಸಬೇಕು ಎಂದು ದೇಸಾಯಿ ಆಗ್ರಹಿಸಿದ್ದಾರೆ.







