ಕೋವಿಡೇತರ ರೋಗಿಗಳ ಚಿಕಿತ್ಸಾ ವೆಚ್ಚದ ಮೇಲಿನ ಮಿತಿ ರದ್ದತಿಯನ್ನು ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ

ಹೊಸದಿಲ್ಲಿ,ಜು.19: ಕೋವಿಡೇತರ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಗಳು ವಿಧಿಸುತ್ತಿರುವ ದರಗಳನ್ನು ನಿಯಂತ್ರಿಸಲು ಮಹಾರಾಷ್ಟ್ರ ಸರಕಾರವು ಹೊರಡಿಸಿದ್ದ ನಿರ್ದೇಶದ ವಿರುದ್ಧ ಬಾಂಬೆ ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತಕ್ಷೇಪ ನಡೆಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ.
ಇಂತಹ ಅಧಿಸೂಚನೆಗಳನ್ನು ಹೊರಡಿಸಲು ರಾಜ್ಯಗಳಿಗೆ ಅಧಿಕಾರವಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಎಂ.ಆರ್.ಶಾ ಅವರ ಪೀಠವು,ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದಾಗಿ ಕೋವಿಡೇತರ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಬಾಂಬೆ ಉಚ್ಚ ನ್ಯಾಯಾಲಯದ ನಾಗ್ಪುರ ಪೀಠವು ಕಳೆದ ವರ್ಷದ ಅಕ್ಟೋಬರ್ನಲ್ಲಿ ಕೋವಿಡೇತರ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ಪಡೆಯುವ ಶುಲ್ಕಗಳಿಗೆ ಮಿತಿಯನ್ನು ಹೇರಿದ್ದ ರಾಜ್ಯ ಸರಕಾರದ ಅಧಿಸೂಚನೆಯನ್ನು ರದ್ದುಗೊಳಿಸಿತ್ತು. ಇದನ್ನು ಮಹಾರಾಷ್ಟ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.
ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯಗಳನ್ನೇ ವ್ಯಕ್ತಪಡಿಸಿದ್ದ ಉಚ್ಚ ನ್ಯಾಯಾಲಯವು ಸಾಂಕ್ರಾಮಿಕ ರೋಗಗಳ ಕಾಯ್ದೆ,ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಕೋವಿಡ್-19 ನಿಯಮಗಳಡಿ ಇಂತಹ ನಿರ್ಧಾರಗಳನ್ನು ಕೈಗೊಳ್ಳಲು ರಾಜ್ಯಸರಕಾರಗಳಿಗೆ ಅಧಿಕಾರವಿಲ್ಲ ಎಂದು ಹೇಳಿತ್ತು.
ಮಹಾರಾಷ್ಟ್ರ ಸರಕಾರವು ಖಾಸಗಿ ಆಸ್ಪತ್ರೆಗಳಿಗೆ ದರಪಟ್ಟಿಯನ್ನು ನಿಗದಿಗೊಳಿಸಿ ಕಳೆದ ವರ್ಷದ ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಎರಡು ಅಧಿಸೂಚನೆಗಳನ್ನು ಹೊರಡಿಸಿತ್ತು. ತಮ್ಮಲ್ಲಿಯ ಶೇ.80ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಮೀಸಲಿಡುವಂತೆ ಮತ್ತು ಉಳಿದ ಶೇ.20ರಷ್ಟು ಹಾಸಿಗೆಗಳನ್ನು ಕೋವಿಡೇತರ ರೋಗಿಗಳ ಚಿಕಿತ್ಸೆಗಾಗಿ ಬಳಸಬಹುದು ಎಂದು ಈ ಅಧಿಸೂಚನೆಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶ ನೀಡಲಾಗಿತ್ತು.







