ಕೇರಳ: ಬಕ್ರೀದ್ ಗಾಗಿ ಕೋವಿಡ್ ನಿರ್ಬಂಧ ಸಡಿಲಿಕೆ; ಅರ್ಜಿಗೆ ತಕ್ಷಣ ಉತ್ತರಿಸುವಂತೆ ಸರಕಾರಕ್ಕೆ ಸುಪ್ರೀಂ ಆದೇಶ

ಹೊಸದಿಲ್ಲಿ,ಜು.19: ಕೇರಳದಲ್ಲಿ ಬಕ್ರೀದ್ ಹಬ್ಬಕ್ಕಾಗಿ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ತಕ್ಷಣ ಉತ್ತರಿಸುವಂತೆ ಸೋಮವಾರ ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಿದ ಸರ್ವೋಚ್ಚ ನ್ಯಾಯಾಲಯವು,ಮಂಗಳವಾರ ಮೊದಲ ವಿಚಾರಣೆಯಲ್ಲಿಯೇ ಈ ವಿಷಯವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.
ಕನ್ವರ್ ಯಾತ್ರೆಗೆ ಅವಕಾಶ ನೀಡುವ ಉತ್ತರ ಪ್ರದೇಶ ಸರಕಾರದ ನಿರ್ಧಾರದ ಕುರಿತು ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ಬಿ.ಆರ್.ಗವಾಯಿ ಅವರ ಪೀಠವು ಪ್ರಕರಣದಲ್ಲಿ ಕೇರಳ ಸರಕಾರದ ನಿರ್ಧಾರವನ್ನೂ ಕೈಗೆತ್ತಿಕೊಂಡಿತು. ಅರ್ಜಿಗೆ ಸಂಜೆಯೊಳಗೆ ಉತ್ತರಿಸುವಂತೆ ಕೇರಳ ಸರಕಾರಕ್ಕೆ ನಿರ್ದೇಶ ನೀಡಿದ ಪೀಠವು,ಈ ವಿಷಯವನ್ನು ಮಂಗಳವಾರ ಮೊದಲ ವಿಚಾರಣೆಗಾಗಿ ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ಸೂಚಿಸಿತು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರವಿವಾರ ಕೋವಿಡ್ ನಿರ್ಬಂಧಗಳಿಂದ ಮೂರು ದಿನಗಳ ಅವಧಿಗೆ ಸಡಿಲಿಕೆಯನ್ನು ಪ್ರಕಟಿಸಿದ್ದರು. ಬಟ್ಟೆ,ಪಾದರಕ್ಷೆ,ಚಿನ್ನಾಭರಣಗಳು,ಉಡುಗೊರೆ ವಸ್ತುಗಳು ಗೃಹೋಪಕರಣಗಳು, ಇಲೆಕ್ಟ್ರಾನಿಕ್ಸ್ ಮತ್ತು ರಿಪೇರಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದರು.
ಕೇರಳ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿಯನ್ನು ಸಲ್ಲಿಸಿರುವ ದಿಲ್ಲಿ ನಿವಾಸಿ ಪಿಕೆಡಿ ನಂಬಿಯಾರ್,ವೈದ್ಯಕೀಯ ತುರ್ತು ಸ್ಥಿತಿಯ ಸಂದರ್ಭದಲ್ಲಿ ಸರಕಾರವು ಇಂತಹ ಕ್ರಮಗಳ ಮೂಲಕ ಜನರ ಜೀವಗಳ ಜೊತೆಗೆ ಚೆಲ್ಲಾಟವಾಡುತ್ತಿರುವುದು ಆಘಾತಕಾರಿಯಾಗಿದೆ. ಈ ಗಂಭೀರ ಪರಿಸ್ಥಿತಿಯಲ್ಲಿ ಅಮಾಯಕ ಪ್ರಜೆಗಳ ಆರೋಗ್ಯ ಮತ್ತು ಜೀವಗಳ ಬಲಿ ನೀಡಲು ಕೇರಳ ಸರಕಾರವು ಸಿದ್ಧವಾಗಿದೆ ಎಂದು ಆಪಾದಿಸಿದ್ದಾರೆ.
ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಎಚ್ಚರಿಕೆ ನೀಡಿದ ಮರುದಿನವೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಬೆಟ್ಟು ಮಾಡಿರುವ ಅರ್ಜಿಯು,ಕನ್ವರ್ ಯಾತ್ರೆಗೆ ಅವಕಾಶ ನೀಡಿರುವುದಕ್ಕೆ ಸರ್ವೋಚ್ಚ ನ್ಯಾಯಾಲಯವು ಆಕ್ಷೇಪ ವ್ಯಕ್ತಪಡಿಸಿದ್ದನ್ನೂ ಉಲ್ಲೇಖಿಸಿದೆ.
ಕೇರಳ ಸರಕಾರವು ವೈದ್ಯಕೀಯ ಇಲಾಖೆಯೊಂದಿಗೆ ಸಮಾಲೋಚಿಸಿಲ್ಲ. ವಿಜಯನ್ ಮತ್ತು ಕೇರಳ ವ್ಯಾಪಾರಿ ವ್ಯವಸಾಯ ವಿಕೋಪನಾ ಸಮಿತಿಯ ನಡುವೆ ಚರ್ಚೆಯ ಬಳಿಕ ನಿರ್ಬಂಧಗಳನ್ನ ಸಡಿಲಿಸಿ ಸರಕಾರವು ಆದೇಶಿಸಿದೆ ಎಂದು ಆರೋಪಿಸಿರುವ ಅರ್ಜಿಯು, ರಾಜಕೀಯ ಹಿತಾಸಕ್ತಿಗಳು ಮತ್ತು ಕಾರಣಗಳು ದೇಶದ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಮೀರುವಂತಿಲ್ಲ. ಕೇರಳ ಸರಕಾರದ ಈ ಕ್ರಮವು ರಾಜಕೀಯ ಪ್ರೇರಿತವಷ್ಟೇ ಅಲ್ಲ,ದೇಶದಲ್ಲಿಯ ದಯನೀಯ ಸ್ಥಿತಿಯ ಬಗ್ಗೆ ಈ ನ್ಯಾಯಾಲಯವು ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದೆ.







