ಬಿಡಿಎ ಕಾರ್ಯ ನಿರ್ವಹಣೆ ಬಗ್ಗೆ ಹೈಕೋರ್ಟ್ ಅಸಮಾಧಾನ

ಬೆಂಗಳೂರು, ಜು.19: ಬಿಡಿಎ ವಿರುದ್ದ ನ್ಯಾಯಾಂಗ ನಿಂದನೆ ವಿಚಾರಣೆ ಸಂದರ್ಭದಲ್ಲಿ ಬಿಡಿಎ ಕಾರ್ಯ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಆ.23ರೊಳಗೆ ಪ್ರಮಾಣ ಪತ್ರ ಸಲ್ಲಿಸಲು ಆಯುಕ್ತರಿಗೆ ಸೂಚನೆ ನೀಡಿದೆ.
ಕೋರ್ಟ್ ಆದೇಶಗಳ ಜಾರಿಗೆ ಜನ ಅಲೆಯಬೇಕೆ? ಆದೇಶ ಪಾಲಿಸಲು ಬಿಡಿಎಯಿಂದ ವಿಳಂಬವೇಕೆ? ಅರ್ಧದಷ್ಟು ನ್ಯಾಯಾಂಗ ನಿಂದನೆ ಕೇಸ್ ಬಿಡಿಎ ಮೇಲಿದೆ. ಇದು ಬಿಡಿಎಯ ಶೋಚನೀಯ ಸ್ಥಿತಿಗೆ ನಿದರ್ಶನವಾಗಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ಬಿಡಿಎ ಆಯುಕ್ತರು, ಕಂಪ್ಯೂಟರೀಕರಣ ಮಾಡಿ ಪರಿಸ್ಥಿತಿ ಸುಧಾರಿಸುತ್ತಿದ್ದೇವೆ. ಅಧಿಕಾರಿಗಳ ತಪ್ಪಿಗೆ ನ್ಯಾಯಾಲಯಕ್ಕೆ ಓಡಾಡಬೇಕಿದೆ. ಬೇರೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಕಚೇರಿಯಲ್ಲಿ ಕುಳಿತು ವಿಸಿ ಮೂಲಕ ಹಾಜರಾಗಿದ್ದೀರಿ, ಮೊದಲ ಬಾರಿಗೆ ನ್ಯಾಯಾಂಗ ನಿಂದನೆ ಕೇಸ್‍ಗೆ ಹಾಜರಾಗಿದ್ದೀರಿ. ನ್ಯಾಯಾಲಯಗಳ ಆದೇಶವನ್ನು ಪಾಲಿಸಲು ವಿಳಂಬ ಮಾಡುವುದು ಏಕೆ? ಎಂದು ಪ್ರಶ್ನಿಸಿರುವ ನ್ಯಾಯಾಲಯ, ಈ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಸೂಚಿಸಿತು.





