ಬೆಂಗಳೂರು: ರೌಡಿಶೀಟರ್ ಕೊಲೆ

ಬೆಂಗಳೂರು, ಜು.19: ಪತ್ನಿಯ ಜೊತೆ ಬ್ಯಾಂಕ್‍ಗೆ ಬಂದಿದ್ದ ರೌಡಿಯೊಬ್ಬನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಇಲ್ಲಿನ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಆಡುಗೋಡಿ ರೌಡಿಶೀಟರ್ ಜೋಸೆಫ್ ಯಾನೆ ಬಬ್ಲಿ ಕೊಲೆಯಾದವರು ಎಂದು ಪೊಲೀಸರು ಗುರುತಿಸಿದ್ದಾರೆ.
ಕೋರಮಂಗಲದಲ್ಲಿರುವ 8ನೇ ಬ್ಲಾಕ್‍ನಲ್ಲಿನ ಯೂನಿಯನ್ ಬ್ಯಾಂಕ್ ಶಾಖೆಗೆ ಸೋಮವಾರ ಮಧ್ಯಾಹ್ನ 1:30ರ ವೇಳೆ ಪತ್ನಿಯ ಜೊತೆ ಬಂದಿದ್ದ ಜೋಸೆಫ್‍ನನ್ನು ದುಷ್ಕರ್ಮಿಗಳು ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ.
ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬೈಕ್‍ಗಳಲ್ಲಿ ಬಂದಿದ್ದ 8 ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇನ್ನು, ಕೊಲೆಯಾದ ವ್ಯಕ್ತಿ ಬಬ್ಲಿ ಕೋರಮಂಗಲದ ರಾಜೇಂದ್ರ ಮತ್ತು ವಿವೇಕ ನಗರದ ಜಾರ್ಜ್ ಎಂಬಾತನ ಜೊತೆ ಹಳೆ ದ್ವೇಷ ಹೊಂದಿದ್ದ ಹಿನ್ನೆಲೆಯಲ್ಲಿ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಡಿಸಿಪಿ ಜೋಶಿ ಶ್ರೀನಾಥ್ ಮಹದೇವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.







