ಯುಜಿಸಿ ಮಾರ್ಗಸೂಚಿಯಂತೆ ಡಿಪ್ಲೊಮಾ ಪರೀಕ್ಷೆ: ಮಂಜುನಾಥ್

ಬೆಂಗಳೂರು, ಜು.19: ಯುಜಿಸಿ ನೀಡಿರುವ ಮಾರ್ಗದರ್ಶನದಂತೆ ಡಿಪ್ಲೊಮಾ ಪರೀಕ್ಷೆ ನಡೆಸುವ ಸಂಬಂಧ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದೆಂದು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಮಂಜುನಾಥ್ ಭರವಸೆ ನೀಡಿದ್ದಾರೆ.
ಸೋಮವಾರ ಮಧ್ಯಂತರ ಪರೀಕ್ಷೆಗಳನ್ನು ರದ್ದುಮಾಡಿ ಕೇವಲ ಅಂತಿಮ ಸೆಮಿಸ್ಟರ್ ಪರೀಕ್ಷೆಯನ್ನು ಮಾತ್ರ ಕಡ್ಡಾಯವಾಗಿ ನಡೆಸಬೇಕೆಂದು ಒತ್ತಾಯಿಸಿ ಎಐಡಿಎಸ್‍ಒ ನೇತೃತ್ವದಲ್ಲಿ ನಡೆದ ಡಿಪ್ಲೊಮಾ ವಿದ್ಯಾರ್ಥಿಗಳ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ಯುಜಿಸಿ ಮಾರ್ಗದರ್ಶನವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಇನ್ನೆರಡು ದಿನದಲ್ಲಿ ಸುತ್ತೋಲೆ ಹೊರಡಿಸುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಪ್ರತಿಭಟನೆ: ಯುಜಿಸಿ ಮಾರ್ಗಸೂಜಿ ಪ್ರಕಾರ ಪರೀಕ್ಷೆ ನಡೆಸುವಂತೆ ಆಗ್ರಹಿಸಿ ಡಿಪ್ಲೊಮಾ ವಿದ್ಯಾರ್ಥಿಗಳು ರಾಜ್ಯದ ಕಲಬುರಗಿ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಉಡುಪಿ, ತುಮಕೂರು, ಮೈಸೂರು, ಹಾಸನ, ಮಂಡ್ಯ, ಮುಂತಾದ ಜಿಲ್ಲೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಈ ವೇಳೆ ಎಐಡಿಎಸ್‍ಒ ಕಾರ್ಯದರ್ಶಿ ಅಜಯ್‍ಕಾಮತ್ ಮಾತನಾಡಿ, ಯುಜಿಸಿಯು ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆ ಮಾತ್ರ ನಡೆಸಬೇಕೆಂದು ಸ್ಪಷ್ಟವಾಗಿ ಸೂಚಿಸಿದೆ. ಹೀಗಿರುವಾಗ, ಇದರ ಹೊರತಾಗಿ ಬೇರೆ ಪರೀಕ್ಷೆಗಳನ್ನು ನಡೆಸುವುದು ಅವೈಜ್ಞಾನಿಕ ಮಾತ್ರವಲ್ಲ ಕಾನೂನುಬಾಹಿರ ಕೂಡ ಆಗುತ್ತದೆ. ರಾಜ್ಯ ಸರಕಾರ ಈ ಕೂಡಲೇ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿ-ಶಿಕ್ಷಣದ ಪರವಾದ ನಿರ್ಧಾರವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.







