ಮಂಡ್ಯ: ಯುವಕನ ಕೊಲೆ ಪ್ರಕರಣ; 6 ಆರೋಪಿಗಳ ಬಂಧನ

ಮಂಡ್ಯ, ಜು.19: ಮಳವಳ್ಳಿ ತಾಲೂಕು ಹಲಗೂರು ಬಳಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಹಲಗೂರು ಸಿಪಿಐ ಡಿ.ಪಿ.ಧನರಾಜ್, ಪಿಎಸ್ಸೈ ಮಾರುತಿ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.
ಮಳವಳ್ಳಿ ತಾಲೂಕು ಪುರದದೊಡ್ಡಿ ಗ್ರಾಮದ ಎಚ್.ಎನ್.ರವಿಚಂದ್ರ, ಹಲಗೂರಿನ ಎಚ್.ಎನ್.ಪ್ರಶಾಂತ, ಕಿರಣ್, ಮಡಳ್ಳಿದೊಡ್ಡಿಯ ಜಿ.ಎಸ್.ಅಭಿಲಾಷ, ಕೊನ್ನಾಪುರದ ಹೇಮಂತ್‍ಗೌಡ ಹಾಗೂ ಒ.ಬಿ.ದೊಡ್ಡಿಯ ಮುದ್ದೇಗೌಡ ಬಂಧಿತರು. ಇವೆರಲ್ಲರೂ ಆಟೋ, ಕಾರು, ಲಾರಿ ಚಾಲಕರು.
ಜು.13ರ ತಡರಾತ್ರಿ ಹಲಗೂರಿನ ಮಾಸ್ತಮ್ಮ ದೇವಸ್ಥಾನದ ಬಳಿ ಟೀ ಕುಡಿಯುತ್ತಾ ಕುಳಿತಿದ್ದ ಮಳವಳ್ಳಿ ಎನ್‍ಇಎಸ್ ಬಡಾವಣೆಯ ಸಿದ್ದರಾಚೇಗೌಡ ಅವರ ಪುತ್ರ ಸಿ.ಎಸ್.ರಾಜು(34) ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿತ್ತು. ಮಾರನೆ ದಿನ ಚಿಕಿತ್ಸೆ ಫಲಕಾರಿಯಾಗದೆ ರಾಜು ಮೃತಪಟ್ಟಿದ್ದರು.
ಜು.13ರಂದು ಮಧ್ಯಾಹ್ನ ತಲಕಾಡು ಬಳಿಯಿರುವ ಶಿಂಷಾ ಮಾರಮ್ಮ ದೇವಸ್ಥಾನದಲ್ಲಿ ಊಟದ ವಿಚಾರವಾಗಿ ಆರೋಪಿ ರವಿಚಂದ್ರ ಮತ್ತು ಮೃತ ರಾಜು ನಡುವೆ ಗಲಾಟೆ ಆಗಿತ್ತು. ಆರೋಪಿ ರವಿಚಂದ್ರ ಇತರ ಆರೋಪಿಗಳೊಂದಿಗೆ ಗಾರ್ಮೆಂಟ್ಸ್ ಕಾರ್ಮಿಕರನ್ನು ಡ್ರಾಪ್ ಮಾಡಲು ಹಲಗೂರಿಗೆ ಬಂದಾಗ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ್ದ ಕಾರು, ಅಪೆ ಆಟೋ, ಲಾಂಗು, ಬಟನ್ ಚಾಕುವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳು ನ್ಯಾಯಾಂಗ ಬಂಧನಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.







