ಆಗಸ್ಟ್ ನಿಂದ ತೈಲ ಉತ್ಪಾದನೆ ಹೆಚ್ಚಿಸಲು ಒಪೆಕ್ ಸದಸ್ಯರ ಮತ್ತು ಮಿತ್ರದೇಶಗಳ ಒಪ್ಪಿಗೆ
ದುಬೈ, ಜು.19: ವಿಶ್ವವು ಕೊರೋನ ಸೋಂಕಿನ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ತೈಲೋತ್ಪನ್ನಗಳ ಬೇಡಿಕೆ ಹೆಚ್ಚುವ ನಿರೀಕ್ಷೆಯಿರುವುದರಿಂದ ಆಗಸ್ಟ್ ನಿಂದ ದಿನವೊಂದಕ್ಕೆ 4 ಲಕ್ಷ ಬ್ಯಾರೆಲ್ ಹೆಚ್ಚುವರಿ ತೈಲ ಉತ್ಪಾದಿಸಲು ಸೌದಿ ಅರೆಬಿಯಾ ಮತ್ತು ರಶ್ಯಾ ನೇತೃತ್ವದ ಒಪೆಕ್ ಸಂಘಟನೆ ಹಾಗೂ ಅದರ ಮಿತ್ರದೇಶಗಳು ಒಪ್ಪಿದೆ ಎಂದು ವರದಿಯಾಗಿದೆ.
ಮುಂದಿನ ತಿಂಗಳಿನ ಆರಂಭದಿಂದ ದಿನವೊಂದಕ್ಕೆ ಹೆಚ್ಚುವರಿ 4 ಲಕ್ಷ ಬ್ಯಾರೆಲ್ ತೈಲ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸೌದಿ ಅರೆಬಿಯಾ ನೇತೃತ್ವದ ಒಪೆಕ್ ಹಾಗೂ ರಶ್ಯಾ ನೇತೃತ್ವದ ಒಪೆಕ್ ಹೊರತಾದ ದೇಶಗಳು(ಒಟ್ಟಾಗಿ ಇವನ್ನು ಒಪೆಕ್ + ದೇಶಗಳು ಎಂದು ಕರೆಯಲಾಗುತ್ತದೆ) ನಿರ್ಧರಿಸಿದ್ದವು. ಈ ಒಪ್ಪಂದ ಕನಿಷ್ಟ 2022ರ ಅಂತ್ಯದವರೆಗೆ ಮುಂದುವರಿಯಲಿದೆ ಎಂದು ಸೌದಿಯ ಇಂಧನ ಸಚಿವ ರಾಜಕುಮಾರ ಅಬ್ದುಲ್ ಅಝೀಝ್ ಬಿನ್ ಸಲ್ಮಾನ್ ಸಭೆಯ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಕಚ್ಛಾತೈಲ ಉತ್ಪಾದನೆ ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಕಳೆದ ವಾರ ನಡೆದಿದ್ದ ಒಪೆಕ್+ ಸಭೆ ವಿಫಲವಾಗಿತ್ತು. ಆದ್ದರಿಂದ ಒಪೆಕ್ + ರಾಷ್ಟ್ರಗಳ ಮಧ್ಯೆ ಒಡಕು ಮೂಡಿದೆ ಎಂಬ ವದಂತಿ ಹಬ್ಬಿತ್ತು. ಈ ವದಂತಿಗಳಿಗೆ ಇಂದಿನ ಯಶಸ್ವೀ ಸಭೆ ಉತ್ತರವಾಗಿದೆ. ಒಪೆಕ್+ ಸಂಘಟನೆಗೆ ಯುಎಇ ಬದ್ಧವಾಗಿದೆ ಮತ್ತು ಯಾವತ್ತೂ ಇದರೊಂದಿಗೆ ಕಾರ್ಯ ನಿರ್ವಹಿಸಲಿದೆ ಎಂದು ಯುಎಇ ಇಂಧನ ಸಚಿವ ಮಝ್ರೂಯಿ ಹೇಳಿದ್ದಾರೆ.
ರಶ್ಯಾ ಯಾವುದಕ್ಕೂ ಬೆಂಬಲ ಸೂಚಿಸುತ್ತದೆ ಎಂಬ ರಶ್ಯಾದ ಉಪಪ್ರಧಾನಿ ಮತ್ತು ಒಪೆಕ್ ಹೊರತಾದ ಸಂಘಟನೆಯ ಸಹ ಅಧ್ಯಕ್ಷ ಅಲೆಕ್ಸಾಂಡರ್ ನೊವಾಕ್ ಅವರ ಸಂದೇಶ ಸಂಘಟನೆಯ ಸದೃಢತೆಗೆ ನಿರ್ದಶನವಾಗಿದೆ ಎಂದು ರಾಜಕುಮಾರ ಅಬ್ದುಲ್ಲಝೀಝ್ ಹೇಳಿರುವುದಾಗಿ ಸುದ್ಧಿಸಂಸ್ಥೆಗಳು ವರದಿ ಮಾಡಿವೆ.