ಕೆಆರ್ ಎಸ್ ಡ್ಯಾಂ ಬಳಿ ರಸ್ತೆಯ ಕಲ್ಲುಗಳು ಕುಸಿತ: ಇದು ಎಚ್ಚರಿಕೆಯ ಸಂದೇಶ ಎಂದ ಸಂಸದೆ ಸುಮಲತಾ

ಮಂಡ್ಯ, ಜು.19: ಗಣಿಗಾರಿಕೆಯಿಂದ ಕೆಆರ್ ಎಸ್ ಅಣೆಕಟ್ಟೆಗೆ ಅಪಾಯವಿದೆ ಎಂಬ ವಿಷಯ ಚರ್ಚೆಯಲ್ಲಿರುವಾಗಲೇ ಅಣೆಕಟ್ಟೆಯ ಬಳಿ ರವಿವಾರ ತಡರಾತ್ರಿ ಕಲ್ಲುಗಳು ಕುಸಿದು ಬಿದ್ದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಡ್ಯಾಂನ ಕೆಳಭಾಗದಲ್ಲಿರುವ ಬೃಂದಾವನ ಉದ್ಯಾವನದಿಂದ ಜಲಾಶಯದ ಮೇಲುಗಡೆಗೆ ಹೋಗುವ ರಸ್ತೆಯ ತಳಹದಿಯ ಸುಮಾರು 30 ಕಲ್ಲುಗಳು ಕುಸಿತವಾಗಿದ್ದು, ಇದರಿಂದ ಯಾವುದೇ ಆತಂಕಪಡುವ ಅಗತ್ಯವಿಲ್ಲವೆಂದು ಸೂಪರಿಂಟೆಂಡೆಂಟ್ ಇಂಜನಿಯರ್ ವಿಜಯಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ರವಿವಾರ ರಾತ್ರಿ 10 ಗಂಟೆಗೆ ಈ ಘಟನೆ ಸಂಭವಿಸಿದೆ. ಡ್ಯಾಂಗೆ ಸುಮಾರು 15 ಮೀಟರ್ ದೂರದಲ್ಲಿರುವ ಉದ್ಯಾವನ ರಸ್ತೆಯ ಕಲ್ಲುಗಳು ಕುಸಿದಿವೆ. ಈ ಕುಸಿತ ಡ್ಯಾಂಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದರು.
ಅಣೆಕಟ್ಟೆ ಕಲ್ಲುಗಳು ಕುಸಿದಿರುವುದು ರೆಡ್ ಅಲರ್ಟ್ ಸಂದೇಶವಾಗಿದೆ. ತನ್ನನ್ನು ಕಾಪಾಡುವಂತೆ ಡ್ಯಾಂ ಕೂಗಿ ಹೇಳುತ್ತಿದೆ ಎಂದು ಗಣಿಗಾರಿಕೆಯಿಂದ ಡ್ಯಾಂಗೆ ಅಪಾಯವಿದೆ ಎಂದು ಪ್ರತಿಪಾದಿಸುತ್ತಿರುವ ಸಂಸದೆ ಸುಮಲತಾ ಅಂಬರೀಶ್ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದೊಂದು ಎಚ್ಚರಿಕೆಯ ಸಂದೇಶವಾಗಿದ್ದು, ನಿರ್ಲಕ್ಷ್ಯ ಮಾಡಬಾರದು. ಈಗಲೇ ಮುನ್ನೆಚ್ಚರಿಕೆವಹಿಸಬೇಕು. ಅಧಿಕಾರಿಗಳು ನೀಡುತ್ತಿರುವ ಮಾಹಿತಿಯಲ್ಲಿ ಗೊಂದಲ ಇದೆ. ಹಾಗಾಗಿ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಸತ್‍ನಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ದೂರವಾಣಿ ಕರೆಮಾಡಿ ವಿಚಾರಿಸಿದಾಗ ಸಂಜೆ 5:15ರಲ್ಲಿ ಕಲ್ಲು ಕುಸಿದಿವೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದರೆ, ಜಿಲ್ಲಾಧಿಕಾರಿ ಅಶ್ವಥಿ ಅವರು ರಾತ್ರಿ 9:30ಕ್ಕೆ ಎಂದು ಹೇಳಿದರು. ಅಧಿಕಾರಿಗಳು ಕಲ್ಲು ಕುಸಿದಿರುವ ವಿಚಾರದಲ್ಲಿ ಬೇಜವಾಬ್ಧಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.









