ಸಂಸತ್ ನಲ್ಲಿ ಪೆಗಾಸಸ್ ಗದ್ದಲ: ಮೊದಲ ದಿನವೇ ಕಲಾಪ ಬಲಿ
ಉಭಯ ಸದನಗಳ ಕಲಾಪ ಮುಂದೂಡಿಕೆ

ಹೊಸದಿಲ್ಲಿ, ಜು.19: ಇಂದು ಆರಂಭಗೊಂಡ ಸಂಸತ್ನ ಮುಂಗಾರು ಅಧಿವೇಶನದ ಮೊದಲ ದಿನವೇ ಗದ್ದಲ ತಾಂಡವವಾಡಿಗೆ, ಪೆಗಾಸಸ್ ಹಗರಣ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಕೋಲಾಹಲವೆಬ್ಬಿಸಿದ್ದರಿಂದ ಉಭಯ ಸದನಗಳ ಕಲಾಪಗಳನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಸಂಪುಟದ ನೂತನ ಸಚಿವರನ್ನು ಪರಿಚಯಿಸಲು ಮುಂದಾದಾಗ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರತಿಪಕ್ಷ ಸದಸ್ಯರು ಗದ್ದಲವೆಬ್ಬಿಸಿದರು. ಪೆಗಾಸಸ್ ಸ್ಪೈವೇರ್ ಮೂಲಕ ರಾಜಕಾರಣಿಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ವಿವಿಧ ಗಣ್ಯರ ಮೊಬೈಲ್ ಫೋನ್ ಗಳನ್ನು ಸರಕಾರ ಕದ್ದಾಲಿಕೆ ಮಾಡುತ್ತಿದೆಯೆಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು ಮತ್ತು ಕಲಾಪಕ್ಕೆ ಅಡ್ಡಿಪಡಿಸಿದರು.
ಪ್ರತಿಪಕ್ಷ ಸದಸ್ಯರ ಗದ್ದಲಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮೋದಿಯವರು ರೈತರ ಮಕ್ಕಳು, ಮಹಿಳೆಯರು, ಪರಿಶಿಷ್ಟ ಹಾಗೂ ಓಬಿಸಿ ಸಮುದಾಯಗಳಿಗೆ ಸೇರಿದವರು ಸಚಿವರಾಗುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲವೆಂದು ಕಟಕಿಯಾಡಿದರು. ಇಂತಹ ನಕರಾತ್ಮಾಕ ಮನಸ್ಥಿತಿಯನ್ನು ತಾನು ಸಂಸತ್ ನಲ್ಲಿ ಹಿಂದೆಂದೂ ಕಂಡಿಲ್ಲವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಪಕ್ಷಗಳು ಕಲಾಪಗಳಲ್ಲಿ ಪಾಲ್ಗೊಂಡು ಸರಕಾರಕ್ಕೆ ಯಾವುದೇ ರೀತಿಯ ಕಠಿಣವಾದ ಪ್ರಶ್ನೆಗಳನ್ನು ಕೇಳಬಹುದಾಗಿದೆ ಎಂದವರು ಹೇಳಿದರು.
ಆದರೂ ವಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗುವುದನ್ನು ನಿಲ್ಲಿಸಲಿಲ್ಲ. ಈ ಸಂದರ್ಭದಲ್ಲಿ ಕಲಾಪಗಳನ್ನು ನಡೆಸುವುದೇ ಅಸಾಧ್ಯವಾಗಿ ಸದನವನ್ನು ಮಧ್ಯಾಹ್ನ 3.30ರವರೆಗೆ ಮುಂದೂಡಲಾಯಿತು. ಆನಂತರ ಮತ್ತೆ ಸದನ ಕಲೆತಾಗ ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆಯೇ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ ಪೆಗಾಸಸ್ ಹ್ಯಾಕಿಂಗ್ ಕುರಿತ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯು ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕ ಹಚ್ಚುವ ಪ್ರಯತ್ನವಾಗಿದೆ ಎಂದು ಹೇಳಿದರು. ಇಂತಹ ವರದಿಗಳಿಗೆ ವಾಸ್ತವಿಕ ತಳಹದಿಯಿಲ್ಲವೆಂದು ಹೇಳಿದರು. ಸಂಸತ್ ನ ಮುಂಗಾರು ಅಧಿವೇಶನದ ಆರಂಭಕ್ಕೆ ಒಂದು ದಿನ ಮೊದಲು ಪೆಗಾಸಸ್ ಸ್ಪೈವೇರ್ ಕುರಿತ ಪತ್ರಿಕಾ ವರದಿ ಪ್ರಕಟವಾಗಿರುವುದರ ಹಿಂದೆ ಕಾಣದ ಕೈಗಳ ಕೈವಾಡವಿದೆಯೆಂದು ಅವರು ಸೂಚ್ಯವಾಗಿ ಹೇಳಿದರು. ಸಚಿವರ ಹೇಳಿಕೆ ಮುಗಿಯುತ್ತಿದ್ದಂತೆಯೇ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮಂಗಳವಾದವರೆಗೆ ಮುಂದೂಡಿದರು.
ಇತ್ತ ರಾಜ್ಯಸಭೆ ಕೂಡಾ ಕೋಲಾಹಲ ತಾಂಡವವಾಡಿತು. ಮಧ್ಯಾಹ್ನ 3:00 ಗಂಟೆಯ ವೇಳೆಗೆ ರಾಜ್ಯಸಭೆ ಮರುಸಮಾವೇಶಗೊಳ್ಳುತ್ತಿದ್ದಂತೆಯೇ ಪ್ರತಿಪಕ್ಷ ಸದಸ್ಯರು ಸದನದ ಮುಂಭಾಗಕ್ಕೆ ಬಂದು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಗದ್ದಲದ ನಡುವೆಯೇ ರಾಜ್ಯಸಭೆಯ ಉಪಸಭಾಪತಿ ಹರಿವಂಶ ಅವರು ಕಲಾಪಗಳನ್ನು ನಿರ್ವಹಿಸಲು ಯತ್ನಿಸಿದರು. ಆದಾಗ್ಯೂ ಪ್ರತಿಭಟನ ನಿರತ ಸದಸ್ಯರು ಘೋಷಣೆಗಳನ್ನು ಕೂಗುವದನ್ನು ನಿಲ್ಲಿಸಲಿಲ್ಲ. ಇನ್ನೂ ಹಲವು ಪ್ರತಿಪಕ್ಷ ಸದಸ್ಯರು ಸದನದ ಮುಂಭಾಗಕ್ಕೆ ಧಾವಿಸಿ ಕಲಾಪಕ್ಕೆ ಅಡ್ಡಿಪಡಿಸಿದರು. ಆನಂತರ ಸದನವನ್ನು ಮಂಗಳವಾರದವರೆಗೆ ಮುಂದೂಡಲಾಯಿತು.
ನೂತನ ಸದಸ್ಯರ ಪ್ರಮಾಣ
ಬಿಜೆಪಿಯ ಬೆಳಗಾವಿ ಸಂಸದೆ ಮಂಗಳಾ ಅಂಗಡಿ, ವೈಎಸ್ಆರ್ ಕಾಂಗ್ರೆಸ್ ನ ಮದ್ದಿಲ ಗುರುಮೂರ್ತಿ ಹಾಗೂ ಐಯುಎಂಎಲ್ ನ ಅಬ್ದುಸಮದ್ ಸಮದಾನಿ ಮತ್ತು ಕಾಂಗ್ರೆಸ್ ಪಕ್ಷದ ವಿಜಯ ವಸಂತ್ ನೂತನ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು.







