ಜಾಮಿಯಾ ಮಿಲ್ಲಿಯಾ ವಿವಿ ದಫನಭೂಮಿಯಲ್ಲಿ ದಾನಿಶ್ ಸಿದ್ದೀಕಿ ಅಂತ್ಯಸಂಸ್ಕಾರ

ಹೊಸದಿಲ್ಲಿ, ಜು.19: ಅಪಘಾನಿಸ್ತಾನದಲ್ಲಿ ತಾಲಿಬಾನ್ ದಾಳಿಯಿಂದ ಮೃತಪಟ್ಟ ಪುಲಿಟ್ಸರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್ ದಾನಿಶ್ ಸಿದ್ದೀಕಿ ಅಂತ್ಯಸಂಸ್ಕಾರ ರವಿವಾರ ಹೊಸದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ದಫನಭೂಮಿಯಲ್ಲಿ ನೆರವೇರಿದ್ದು ನೂರಾರು ಮಂದಿ ಅಂತಿಮ ಗೌರವ ಸಲ್ಲಿಸಿದರು ಎಂದು ಮೂಲಗಳು ಹೇಳಿವೆ.
ಈ ದಫನಭೂಮಿಯಲ್ಲಿ ವಿವಿಯ ಸಿಬ್ಬಂದಿಗಳು ಅವರ ಕುಟುಂಬದವರು ಹಾಗೂ ಎಳೆಯ ಮಕ್ಕಳ ಅಂತ್ಯಸಂಸ್ಕಾರಕ್ಕೆ ಮಾತ್ರ ಅವಕಾಶವಿದೆ. ಆದರೆ ಸಿದ್ದೀಕಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಬೇಕೆಂದು ಕುಟುಂಬದವರು ಸಲ್ಲಿಸಿದ ಕೋರಿಕೆಗೆ ಜಾಮಿಯಾ ಮಿಲ್ಲಿಯಾ ವಿವಿಯ ಉಪಕುಲಪತಿ ಸಮ್ಮತಿಸಿದ್ದರಿಂದ ಇಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದ್ದು ಸಿದ್ದೀಕಿ ಕುಟುಂಬದ ಸದಸ್ಯರಲ್ಲದೆ ವಿವಿಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಗೂ ಸಹ ಪತ್ರಕರ್ತರು ಭಾಗವಹಿಸಿದ್ದರು.
ರವಿವಾರ ಸಂಜೆ 6 ಗಂಟೆಗೆ ಸಿದ್ದೀಕಿ ಮೃತದೇಹ ದಿಲ್ಲಿ ವಿಮಾನನಿಲ್ದಾಣ ತಲುಪಿತ್ತು. ಅಲ್ಲಿಂದ ಮೆರವಣಿಗೆ ಮೂಲಕ ಮೃತದೇಹವನ್ನು ಮನೆಗೆ ಕೊಂಡೊಯ್ಯಲಾಗಿದ್ದು ಅವರ ಪೋಷಕರು, ಪತ್ನಿ, ಮಕ್ಕಳು ಹಾಗೂ ಮಿತ್ರರು, ಅಭಿಮಾನಿಗಳು, ಸ್ನೇಹಿತರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭ ಜನರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು. ಸುರಕ್ಷಿತ ಅಂತರ ಪಾಲನೆ ಮತ್ತಿತರ ನಿಯಮಾವಳಿಗಳನ್ನು ಪಾಲಿಸಿ, ಮೆರವಣಿಗೆಯೊಂದಿಗೆ ಜಾಮಿಯಾ ಮಿಲ್ಲಿಯಾ ವಿವಿಯ ಆವರಣದಲ್ಲಿರುವ ದಫನಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ವರದಿಯಾಗಿದೆ.







