ನಿರಾಣಿ ಶುಗರ್ಸ್ ಕ್ರಮ ವಿರೋಧಿಸಿ ಕಾರ್ಖಾನೆಯ ಚಿಮಣಿ ಏರಿ ಕಾರ್ಮಿಕರ ಪ್ರತಿಭಟನೆ
ಕೆಲಸ ನೀಡುವ ಪ್ರಕಟನೆ ಹೊರಡಿಸಿದ ಬಳಿಕ ಕೆಳಗಿಳಿದ ಕಾರ್ಮಿಕರು

ಪಾಂಡವಪುರ, ಜು.19: 21 ಜನ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿರಿವ ನಿರಾಣಿ ಶುಗರ್ಸ್ ಕ್ರಮ ವಿರೋಧಿಸಿ ಇಬ್ಬರು ಪಿಎಸ್‍ಎಸ್‍ಕೆ ನೌಕರರು 200 ಅಡಿ ಎತ್ತರದ ಚಿಮಣಿ ಏರಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಬೆಳಗ್ಗೆ ಪಿಎಸ್‍ಎಸ್‍ಕೆ ಆವರಣದಲ್ಲಿ ನಡೆದಿದ್ದು, ಆತಂಕಕ್ಕೆ ಕಾರಣವಾಯಿತು.
ರಾಮಕೃಷ್ಣ ಮತ್ತು ಮನು ಎಂಬ ಇಬ್ಬರು ಕಾರ್ಮಿಕರು ಸೋಮವಾರ ಬೆಳಗ್ಗೆ ಸುಮಾರು 11:30 ಗಂಟೆಗೆ 200 ಅಡಿ ಎತ್ತರದ ಸಕ್ಕರೆ ಕಾರ್ಖಾನೆಯ ಬೃಹತ್ ಚಿಮಣಿ ಏರಿ ಪ್ರತಿಭಟನೆ ನಡೆಸಿದ್ದು, ಉಳಿದ ಕಾರ್ಮಿಕರೂ ಚಿಮಣಿ ಏರಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದು ಸಂಭವಿಸಬಹುದಾದ ಅನಾಹುತವನ್ನು ತಡೆದರು.
ರಾಮಕೃಷ್ಣ ಹಾಗೂ ಮನು ಸೇರಿದಂತೆ 21 ಜನ ಕಾರ್ಮಿಕರು ಪಿಎಸ್‍ಎಸ್‍ಕೆ ಕಾರ್ಖಾನೆಯ ನೌಕರರಾಗಿದ್ದು, ಕಾರ್ಖಾನೆಯನ್ನು ಸರಕಾರ 40 ವರ್ಷಗಳ ಅವಧಿಗೆ ನಿರಾಣಿ ಶುಗರ್ಸ್ ಕಂಪನಿಗೆ ಗುತ್ತಿಗೆಗೆ ನೀಡುವಾಗ 21 ಜನ ಕಾರ್ಮಿಕರನ್ನೂ ನಿರಾಣಿ ಶುಗರ್ಸ್ ಸುಪರ್ಧಿಗೆ ಒಪ್ಪಿಸಿತ್ತು.
ಕಳೆದ ಹಂಗಾಮಿನಲ್ಲಿ ಮೇಲ್ಕಂಡ 21 ಜನ ಕಾರ್ಮಿಕರೂ ನಿರಾಣಿ ಶುಗರ್ಸ್ ಕಂಪನಿಯಲ್ಲಿ ಕೆಲಸ ಮಾಡಿದ್ದು, ಮಾ.29 ರಂದು ಏಕಾಏಕಿ ಯಾವುದೇ ಕಾರಣ ನೀಡದೆ ನಿರಾಣಿ ಶುಗರ್ಸ್ ಸಿಜೆಎಂ ಅವರು 21 ಜನ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದನ್ನು ಪಿಎಸ್‍ಎಸ್‍ಕೆ ಎಂಡಿ ಅನುಮೋದಿಸಿದ್ದರು.
ಇದನ್ನು ಖಂಡಿಸಿ 21 ಜನ ಕಾರ್ಮಿಕರು ಹೈಕೋರ್ಟ್ ಮೆಟ್ಟಿಲೇರಿ ಆದೇಶಕ್ಕೆ ತಡೆಯಾಜ್ಞೆಯನ್ನು ತಂದಿದ್ದರೂ ಕೋರ್ಟ್ ಆದೇಶಕ್ಕೆ ಕ್ಯಾರೆ ಎನ್ನದ ನಿರಾಣಿ ಶುಗರ್ಸ್ ಅಧಿಕಾರಿಗಳು ಒಂದು ತಿಂಗಳಿಂದ 21 ಜನ ಕಾರ್ಮಿಕರಿಗೆ ಕೆಲಸ ನೀಡದೆ ಸತಾಯಿಸುತ್ತಿದ್ದರು. ಇದರಿಂದ ಬೇಸತ್ತ ಕಾರ್ಮಿಕರು ಸೋಮವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಕಾರ್ಖಾನೆಯ ಬೃಹತ್ ಚಿಮಣಿ ಏರಿ ಪ್ರತಿಭಟನೆ ನಡೆಸಿದರು.
ವಿಷಯ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ತಂಡ ಪಿಎಸ್‍ಎಸ್‍ಕೆ ಕಾರ್ಖಾನೆಗೆ ಆಗಮಿಸಿ ಇಬ್ಬರು ಕಾರ್ಮಿಕರ ರಕ್ಷಣೆಗೆ ಮುಂದಾದರು. ಈ ವೇಳೆ ತಹಸಿಲ್ದಾರ್ ಪ್ರಮೋದ್ ಎಲ್.ಪಾಟೀಲ್, ಪಿಎಸ್‍ಎಸ್‍ಕೆ ಎಂಪ್ಲಾಯಿಸ್ ಯೂನಿಯನ್ ಅಸೋಸಿಯೇಷನ್ ಅಧ್ಯಕ್ಷ ಚಿಕ್ಕಯ್ಯ ನಿರಾಣಿ ಶುಗರ್ಸ್ ಸಿಜೆಎಂ ಶಿವಾನಂದ ಸಲಗಾರ ಅವರ ಜತೆ ಮಾತುಕತೆ ನಡೆಸಿದ ಪರಿಣಾಮ 21 ಜನ ಕಾರ್ಮಿಕರಿಗೆ ಕೆಲಸ ನೀಡುವುದಾಗಿ ಕಾರ್ಖಾನೆ ನೊಟೀಸ್ ಬೋರ್ಡ್‍ನಲ್ಲಿ ಪ್ರಕಟನೆ ಹೊರಡಿಸಿದ ಬಳಿಕ ಚಿಮಣಿ ಏರಿದ್ದ ಇಬ್ಬರು ಕಾರ್ಮಿಕರು ಕೆಳಗಿಳಿದಾಗ ಆವರಣದಲ್ಲಿ ನೆರೆದಿದ್ದ ನೂರಾರು ಕಾರ್ಮಿಕರು ನಿಟ್ಟುಸಿರು ಬಿಟ್ಟರು.
ಬಳಿಕ ಚಿಮಣಿ ಏರಿ ಅಸ್ವಸ್ಥಗೊಂಡಿದ್ದ ರಾಮಕೃಷ್ಣ ಹಾಗೂ ಮನು ಅವರನ್ನು ಪಾಂಡವಪುರ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು. ಸರ್ಕಲ್ ಇನ್ಸ್‍ಪೆಕ್ಟರ್ ಪ್ರಭಾಕರ್, ಪಿಎಸ್‍ಐ ಪೂಜಾ ಕುಂಟೋಜಿ ಸ್ಥಳದಲ್ಲಿ ಹಾಜರಿದ್ದು ಪರಿಸ್ಥಿತಿ ನಿಭಾಯಿಸಿದರು.








