ಯಡಿಯೂರಪ್ಪ ಬದಲಾಯಿಸಿದರೆ ಬಿಜೆಪಿಗೆ ಹೊಡೆತ: ರಂಭಾಪುರಿ ಸ್ವಾಮೀಜಿ
ರಾಯಚೂರು, ಜು. 19: `ತಮ್ಮ ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಾಯಿಸಿದರೆ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ' ಎಂದು ರಂಭಾಪುರಿ ಮಠದ ವೀರ ಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮಿ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾತನಾಡಿದ ಅವರು, `ಬಿ.ಎಸ್.ಯಡಿಯೂರಪ್ಪ ಅವರಿಗೆ ಜನರು ಪಕ್ಷಾತೀತ, ಜಾತ್ಯತೀತವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸಿಎಂ ಸ್ಥಾನದಿಂದ ಅವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ ಎನ್ನುವ ಆತ್ಮವಿಶ್ವಾಸವಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾದ ಆರಂಭದಲ್ಲಿ ರಾಜ್ಯದಲ್ಲಿ ನೆರೆಹಾವಳಿ ಸಮಸ್ಯೆ ಕಾಣಿಸಿಕೊಂಡಿತ್ತು' ಎಂದು ನೆನಪು ಮಾಡಿಕೊಂಡರು.
`ನೆರೆ ಹಾವಳಿ ಬೆನ್ನಲ್ಲೆ ಕೊರೋನ ಸೋಂಕಿನ ಸಂಕಷ್ಟ ಆರಂಭವಾಯಿತು. ಇದೆಲ್ಲದರ ಮಧ್ಯೆಯೂ ಯಡಿಯೂರಪ್ಪ ಅವರು ಸಚಿವರ ಸಹಕಾರ ಮತ್ತು ಜನರ ಸಹಕಾರದೊಂದಿಗೆ ಯಶಸ್ವಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಯಡಿಯೂರಪ್ಪ ಅವರ ಜನಪರಕಾಳಜಿ ಬಗ್ಗೆ ಯಾರು ಅಲ್ಲೆಗಳೆಯುವಂತಿಲ್ಲ. ನಾವು ಅಷ್ಟೇ ಅಲ್ಲ ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಸ್ವಾಮೀಜಿ ಬೆಂಬಲ ಸೂಚಿಸಿದ್ದಾರೆ' ಎಂದು ಶ್ರೀಗಳು ತಿಳಿಸಿದರು.





