ಕೊಡಗನ್ನು ವಿಶ್ವ ದರ್ಜೆಯ ಪ್ರವಾಸಿ ಕೇಂದ್ರವಾಗಿಸುವ ಚಿಂತನೆ: ಸಚಿವ ಯೋಗೇಶ್ವರ್

ಹಾರಂಗಿಗೆ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಭೇಟಿ
ಮಡಿಕೇರಿ, ಜು.19: ಕೊಡಗು ಜಿಲ್ಲೆಯಲ್ಲಿ ‘ಹೆಲಿ ಟೂರಿಸಂ’ ಯೋಜನೆಗೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಕ್ರಿಯಾ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ಪ್ರವಾಸಿ ಕೇಂದ್ರಗಳಿಗೆ ತೆರಳಿದ ಬಳಿಕ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವರು ಮಾತನಾಡಿ, ಹಾರಂಗಿಯ ಹಿನ್ನೀರಿನಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ಸಾಹಸ ಕ್ರೀಡೆಗಳನ್ನು ಹಮ್ಮಿಕೊಳ್ಳಲು ಯೋಜನೆ ಸಿದ್ಧಪಡಿಸಲಾಗಿದೆಯೆಂದು ಮಾಹಿತಿ ನೀಡಿದರು.
ಹೆಲಿ ಟೂರಿಸಂಕ್ಕೆ ಪೂರಕವಾಗಿ ಕೂಡಿಗೆಯಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗುವುದು ಎಂದ ಅವರು, ಕೊಡಗು ಜಿಲ್ಲೆಯನ್ನು ವಿಶ್ವ ದರ್ಜೆಯ ಪ್ರವಾಸಿ ತಾಣವಾಗಿಸಲು ಇಲಾಖೆಯ ಮೂಲಕ ಚಿಂತನೆ ಹರಿಸಲಾಗಿದೆ ಎಂದರು.
ರಾಜ್ಯದ 24 ಜಲಾಶಯಗಳಲ್ಲಿ ನೀರಾವರಿ ಚಟುವಟಿಕೆಗೆ ಸೇರಿದಂತೆ, ಅಲ್ಲಿನ ಪರಿಸರಕ್ಕೆ ಪೂರಕವಾದ ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸಲು ರಾಜ್ಯ ಸರರ್ಕಾರ ಹಸಿರು ನಿಶಾನೆ ತೋರಿದೆ. ಈ ಸಂಬಂಧ ತಾನು ಹಲವು ಜಲಾಶಯ ಪ್ರದೇಶಗಳಿಗೆ ಭೇಟಿನೀಡಿದ್ದು, ಅಧಿಕಾರಿಗಳೊಂದಿಗೆ ಸಂಪೂರ್ಣ ಮಹಿತಿ ಪಡೆದಿರುವುದಾಗಿ ತಿಳಿಸಿದರು.
ಶೀಘ್ರದಲ್ಲೆ ಕೊಡಗು ಜಿಲ್ಲೆಗೆ ತಾನು ಅಧಿಕೃತ ಭೇಟಿ ನೀಡಿ ಜಿಲ್ಲೆಯ ಪ್ರವಾಸಿ ಕೇಂದ್ರಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವುದಾಗಿ ತಿಳಿಸಿದರು. ಇದೇ ಸಂದರ್ಭ ದುಬಾರೆ ಮತ್ತು ಹಾರಂಗಿ ಕೇಂದ್ರಗಳಲ್ಲಿ ಸಚಿವರು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದರು.







