ಟೋಕಿಯೊ ಕ್ರೀಡಾಕೂಟದ ಅರ್ಹತೆ ಕುರಿತು ರೋಹನ್ ಬೋಪಣ್ಣ, ಸಾನಿಯಾ ಮಿರ್ಝಾ ಟ್ವೀಟ್ ಗೆ ಎಐಟಿಎ ಖಂಡನೆ

photo: Twitter
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ಗೆ ಆಟಗಾರರ ಅರ್ಹತೆ ಕುರಿತು ಟೆನಿಸ್ ತಾರೆಯರಾದ ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಝಾ ಅವರು ಮಾಡಿದ್ದ ಟ್ವೀಟ್ಗಳನ್ನು ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ಸೋಮವಾರ ಖಂಡಿಸಿದೆ.
ಒಲಿಂಪಿಕ್ಸ್ ಅರ್ಹತೆಯ ಬಗ್ಗೆ ಎಐಟಿಎ ಆಟಗಾರರನ್ನು ದಾರಿತಪ್ಪಿಸುತ್ತಿದೆ ಎನ್ನುವ ಟೆನಿಸ್ ತಾರೆಯರ ಆರೋಪವನ್ನು ಎಐಟಿಎ ನಿರಾಕರಿಸಿದೆ ಹಾಗೂ ಟ್ವೀಟ್ಗಳು "ಸೂಕ್ತವಲ್ಲ, ದಾರಿತಪ್ಪಿಸುತ್ತವೆ’’ ಎಂದು ಹೇಳಿದೆ.
ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಝಾ ಅವರ ಟ್ವಿಟರ್ ಕಾಮೆಂಟ್ಗಳು ಸೂಕ್ತವಲ್ಲ, ಅವು ದಾರಿತಪ್ಪಿಸುವಂತಿವೆ ಮತ್ತು ಅವರಿಗೆ ನಿಯಮಗಳ ಅರಿವಿಲ್ಲದಿರುವುದನ್ನುತೋರಿಸುತ್ತದೆ. ವಾಸ್ತವ ಸಂಗತಿಯೆಂದರೆ ಭಾರತದ ಅತ್ಯುತ್ತಮ ಪ್ರವೇಶವೆಂಬ ಕಾರಣಕ್ಕೆ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಹೆಸರನ್ನು ಕಳುಹಿಸಲಾಗಿತ್ತು, ಇದು ಸರಿಯಾದ ನಿರ್ಧಾರವಾಗಿತ್ತು. ಆದರೆ, ಇಬ್ಬರೂ ಐಟಿಎಫ್ ನಿಯಮಗಳ ಪ್ರಕಾರ ಅರ್ಹತೆ ಪಡೆಯಲಿಲ್ಲ ಎಐಟಿಎ ಹೇಳಿಕೆಯೊಂದರಲ್ಲಿ ತಿಳಿಸಿದೆ.
ರೋಹನ್ ಬೋಪಣ್ಣ ಐಟಿಎಫ್ ನಿಯಮಗಳ ಪ್ರಕಾರ ಅರ್ಹತೆ ಪಡೆಯಲಾರರು. ಆದ್ದರಿಂದ ಸಾನಿಯಾ ಮಿರ್ಝಾ ಅವರ ಟ್ವೀಟ್ ಕೂಡ ಆಧಾರರಹಿತವಾಗಿದೆ ಹಾಗೂ ಅವರ ಅಭಿಪ್ರಾಯ ಖಂಡನೀಯ ಎಂದು ಎಐಟಿಎ ಹೇಳಿದೆ.
ನಾಮನಿರ್ದೇಶನಗೊಂಡಿರುವ ಬೋಪಣ್ಣ-ದಿವಿಜ್ ಶರಣ್ ಬದಲಿಗೆ ಬೋಪಣ್ಣ ಹಾಗೂ ಸುಮಿತ್ ನಾಗಲ್ ಅವರಿಗೆ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಅವಕಾಶವಿದೆ ಎಂದು ಹೇಳುವ ಮೂಲಕ ಎಐಟಿಎ ಆಟಗಾರರನ್ನು "ದಾರಿ ತಪ್ಪಿಸಿದೆ" ಎಂದು ಸೋಮವಾರ ಬೋಪಣ್ಣ ಟ್ವೀಟ್ ಮಾಡಿದ್ದರು.
"ಐಟಿಎಫ್ ಎಂದಿಗೂ ಸುಮಿತ್ ನಾಗಲ್ ಹಾಗೂ ನನ್ನ ಪ್ರವೇಶವನ್ನು ಸ್ವೀಕರಿಸಿಲ್ಲ. ನಾಮನಿರ್ದೇಶನ ಗಡುವಿನ ನಂತರ (ಜೂನ್ 22) ಗಾಯ / ಅನಾರೋಗ್ಯದ ಹೊರತು ಯಾವುದೇ ಬದಲಾವಣೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ಐಟಿಎಫ್ ಸ್ಪಷ್ಟಪಡಿಸಿದೆ. ಆಟಗಾರರು, ಸರಕಾರ, ಮಾಧ್ಯಮ ಹಾಗೂ ಎಲ್ಲರನ್ನೂ ಎಐಟಿಎ ದಾರಿ ತಪ್ಪಿಸಿದೆ"ಬೋಪಣ್ಣ ಟ್ವೀಟ್ ಮಾಡಿದ್ದರು.
ಬೋಪಣ್ಣ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಸಾನಿಯಾ, ಏನಿದು? ಇದು ನಿಜವಾಗಿದ್ದರೆ ಅದು ಸಂಪೂರ್ಣವಾಗಿ ಹಾಸ್ಯಾಸ್ಪದ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದೆ. ನಾವು ಮಿಶ್ರ ಡಬಲ್ಸ್ ನಲ್ಲಿ ಪದಕ ಗೆಲ್ಲುವಂತಹ ಉತ್ತಮ ಅವಕಾಶವನ್ನು ತ್ಯಾಗ ಮಾಡಿದ್ದೇವೆ ಎಂದು ಟ್ವೀಟಿಸಿದ್ದರು.







