ಸಿದ್ದಕಟ್ಟೆ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಅಧಿಕ ಹಣ ನಮೂದು ಆರೋಪ: ಮೆಸ್ಕಾಂ ವರದಿಯ ನೈಜತೆ ಪರಿಶೀಲನೆ; ಸಚಿವ ಕೋಟ

ಮಂಗಳೂರು, ಜು.19: ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ 110 ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಜಮೀನು ಸಮತಟ್ಟು ಮಾಡಲು 15 ಕೋಟಿ ರೂ. ವ್ಯಯವಾಗಲಿವೆ ಎಂಬ ಮೆಸ್ಕಾಂ ಅಧಿಕಾರಿಗಳ ವರದಿಯ ನೈಜತೆಯನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವಿದ್ಯುತ್ ಉಪಕೇಂದ್ರ ಹಾಗೂ ಪ್ರಸರಣ ಮಾರ್ಗಗಳ ಸಮಸ್ಯೆಗಳ ಕುರಿತು ಚರ್ಚಿಸಲು ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿಕ ಹಣ ನಮೂದಿಸಿರುವ ಬಗ್ಗೆ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಹಾಗೂ ಇಂಜಿನಿಯರಿಂಗ್ ಮತ್ತು ನಿರ್ಮಿತಿ ಕೇಂದ್ರದ ಇಂಜಿನಿಯರ್‌ಗಳಿಂದ ಪರಿಶೀಲನೆ ನಡೆಸಲಾಗುವುದು. ಇದರಲ್ಲಿ ಹೆಚ್ಚಿನ ಹಣ ನಮೂದಿಸಿದ್ದು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಬಂಟ್ವಾಳ ಸಿದ್ದಕಟ್ಟೆಯಲ್ಲಿ ಮೂರೂವರೆಯಿಂದ ಐದು ಎಕರೆ ಪರ್ಯಾಯ ಸ್ಥಳ ಗುರುತಿಸಿ 110 ಕೆವಿ ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಕ್ರಮ ವಹಿಸಲು ಸಚಿವರು ಸೂಚಿಸಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಮಾತನಾಡಿ, 2014ರಲ್ಲಿ ಸಿದ್ದಕಟ್ಟೆಯಲ್ಲಿ ವಿದ್ಯುತ್ ಉಪಕೇಂದ್ರದ ನಿರ್ಮಾಣಕ್ಕೆ ಮೆಸ್ಕಾಂನವರೇ ಭೂಮಿ ಗುರುತಿಸಿದ್ದಾರೆ. ಅಂದು ಅವರು ಇತರ ಪರ್ಯಾಯಕ್ಕೆ ಯಾವುದೇ ಒಲವು ತೋರಿಲ್ಲ. ಅನುಮೋದನೆ, ಅನುಷ್ಠಾನಗೊಂಡ ನಂತರ ಹಣ ಬಿಡುಗಡೆಯಾಗುವ ಸಂದರ್ಭದಲ್ಲಿ ಭೂಮಿ ಸಮತಟ್ಟು ಮಾಡಲು 15 ಕೋಟಿ ರೂ. ವೆಚ್ಚವಾಗಲಿದೆ ಎಂದಿದ್ದರು. ಪರ್ಯಾಯವಾಗಿ ಸರಕಾರಿ ಜಾಗ ಅಥವಾ ಖಾಸಗಿ ಸ್ಥಳ ಗುರುತಿಸಬೇಕಿತ್ತು. ಈ ಬಗ್ಗೆ ಸಂಬಂಧಿಸಿದ ತಹಶೀಲ್ದಾರರೊಂದಿಗೆ ಚರ್ಚೆ ನಡೆಸಬೇಕಿತ್ತು. ಅಗತ್ಯ ಪ್ರಸ್ತಾವನೆಗಳನ್ನು ಸಲ್ಲಿಸಬೇಕಿತ್ತು. ಆದರೆ, ಅದ್ಯಾವುದನ್ನು ಮಾಡಿರುವುದು ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಭೂಮಿ ಸಮತಟ್ಟು ಮಾಡಲು 15 ಕೋಟಿ ರೂಪಾಯಿ ಬೇಕೆನ್ನುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.
ಸಿದ್ದಕಟ್ಟೆ ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಇತರ ಪರ್ಯಾಯ ಗ್ರಾಮವನ್ನು ಗುರುತಿಸುವಂತೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಅವರಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಆ ಗ್ರಾಮದಲ್ಲಿ ಗ್ರಾಮಸಭೆ ನಡೆಸಿ ಗ್ರಾಮಸ್ಥರಲ್ಲಿ ವಿಚಾರಿಸಿದರೆ ಲಭ್ಯವಿರುವ ಭೂಮಿಯ ಬಗ್ಗೆ ಮಾಹಿತಿ ದೊರೆಯಲಿದೆ. ಈ ಗ್ರಾಮಸಭೆಗಳನ್ನು ಕೂಡಲೇ ನಡೆಸಿ ಮೂರೂವರೆಯಿಂದ ಐದು ಎಕರೆ ಜಮೀನು ಗುರುತಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆ ವಿವಿಧ ವಿದ್ಯುತ್ ಉಪಕೇಂದ್ರಗಳ ನಿರ್ಮಾಣ ಹಾಗೂ ಕೈಗೊಂಡಿರುವ ಕಾಮಗಾರಿಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಶಾಸಕರಾದ ರಾಜೇಶ್ ನಾಯಕ್, ಉಮಾನಾಥ್ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ, ಮೆಸ್ಕಾಂ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.







