ಮಾಲಿ: ಮಧ್ಯಂತರ ಅಧ್ಯಕ್ಷರ ಮೇಲೆ ಚೂರಿಯಿಂದ ದಾಳಿ

photo: twitter/@RadioPacisnews
ಬಮಾಕೊ, ಜು.20: ಮಾಲಿ ದೇಶದ ಮಧ್ಯಂತರ ಅಧ್ಯಕ್ಷ ಅಸ್ಸಿಮಿ ಗೊಯಿಟಾ ಮೇಲೆ ದುಷ್ಕರ್ಮಿಯೊಬ್ಬ ಚೂರಿಯಿಂದ ದಾಳಿ ನಡೆಸಲು ಯತ್ನಿಸಿದ್ದು, ದುಷ್ಕರ್ಮಿಯನ್ನು ಬಂಧಿಸಲಾಗಿದೆ ಎಂದು ಸರಕಾರದ ಮೂಲಗಳು ಹೇಳಿವೆ.
ರಾಜಧಾನಿ ಬಮಾಕೊದ ಗ್ರ್ಯಾಂಡ್ ಮಸೀದಿಯಲ್ಲಿ ಈದ್ ಅಲ್ಅಧಾ ಪ್ರಾರ್ಥನೆ ನಡೆಸುವ ಸಂದರ್ಭ ಅಧ್ಯಕ್ಷರ ಮೇಲೆ ವ್ಯಕ್ತಿಯೊಬ್ಬ ಚೂರಿಯಿಂದ ದಾಳಿ ನಡೆಸಲು ಯತ್ನಿಸಿದ್ದಾನೆ. ಭದ್ರತಾ ಪಡೆ ತಕ್ಷಣ ಆತನನ್ನು ಹೆಡೆಮುರಿ ಕಟ್ಟಿದೆ. ಅಧ್ಯಕ್ಷರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಿದ್ದು ಅವರಿಗೆ ಗಾಯವಾಗಿದೆಯೇ ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಧ್ಯಕ್ಷರು ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ ಎಂದು ಬಳಿಕ ಬಿಡುಗಡೆಗೊಳಿಸಿರುವ ಅಧಿಕೃತ ಮಾಹಿತಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಚೂರಿ ಹಿಡಿದ ವ್ಯಕ್ತಿಯೊಬ್ಬ ಅಧ್ಯಕ್ಷರ ಮೇಲೆ ದಾಳಿ ನಡೆಸಿದ್ದು ಗುರಿತಪ್ಪಿ ಬೇರೆಯವರಿಗೆ ಚೂರಿ ಇರಿತವಾಗಿದೆ. ತಕ್ಷಣ ದುಷ್ಕರ್ಮಿಯನ್ನು ಬಂಧಿಸಲಾಗಿದೆ. ಅಧ್ಯಕ್ಷರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಧಾರ್ಮಿಕ ವ್ಯವಹಾರಗಳ ಇಲಾಖೆ ಹೇಳಿದೆ.





