ಕಾಬೂಲ್ ಮೇಲೆ ರಾಕೆಟ್ ದಾಳಿ: ಅಧ್ಯಕ್ಷರ ನಿವಾಸದ ಬಳಿ ಅಪ್ಪಳಿಸಿದ 3 ರಾಕೆಟ್

photo: twitter/@talhaahmad967
ಕಾಬೂಲ್, ಜು.20: ಅಪಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ಮಂಗಳವಾರ 3 ರಾಕೆಟ್ ದಾಳಿ ನಡೆದಿದ್ದು, ಅಧ್ಯಕ್ಷರ ಅರಮನೆ ಬಳಿ ಇವು ಅಪ್ಪಳಿಸಿವೆ ಎಂದು ಮೂಲಗಳು ಹೇಳಿವೆ.
ಜಿಹಾದಿಸ್ಟ್ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟದ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸಂದರ್ಭ ಅಧ್ಯಕ್ಷ ಅಶ್ರಫ್ ಘನಿ ಹಾಗೂ ಇತರ ಮುಖಂಡರ ತಂಡ ಅರಮನೆಯ ಆವರಣದಲ್ಲಿರುವ ಗಾರ್ಡನ್ನಲ್ಲಿ ಈದ್-ಅಲ್ ಅದ್ಹಾ ಪ್ರಾರ್ಥನೆಯಲ್ಲಿ ತೊಡಗಿದ್ದರು. ಅಪಘಾನ್ನಿಂದ ವಿದೇಶಿ ಪಡೆಗಳ ವಾಪಸಾತಿ ಅಂತಿಮ ಹಂತ ತಲುಪಿರುವಂತೆಯೇ ಕಾಬೂಲ್ ಮೇಲೆ ನಡೆದಿರುವ ಮೊದಲ ರಾಕೆಟ್ ದಾಳಿ ಇದಾಗಿದೆ. ಅಧ್ಯಕ್ಷರ ಅರಮನೆ ಸಂಕೀರ್ಣದಲ್ಲಿ ಅಮೆರಿಕದ ರಾಜತಾಂತ್ರಿಕರ ನಿಯೋಗದ ಕಚೇರಿ ಸಹಿತ ಹಲವು ದೇಶಗಳ ರಾಯಭಾರಿ ಕಚೇರಿಗಳಿವೆ.
ಸಮೀಪದಲ್ಲೇ ರಾಕೆಟ್ ಅಪ್ಪಳಿಸಿ ಭಾರೀ ಸ್ಫೋಟದ ಸದ್ದು ಉಂಟಾದರೂ, ಅಪಘಾನಿಸ್ತಾನದ ಸಾಂಪ್ರದಾಯಿಕ ದಿರಿಸು ತೊಟ್ಟಿರುವ ಅಧ್ಯಕ್ಷ ಘನಿ ಸೇರಿದಂತೆ ಹಲವು ಮಂದಿ ಪ್ರಾರ್ಥನೆ ಮುಂದುವರಿಸುತ್ತಿರುವ ವೀಡಿಯೊವನ್ನು ಸರಕಾರದ ಅಧಿಕೃತ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಲಾಗಿದೆ. ಪ್ರಾರ್ಥನೆಯ ಬಳಿಕ ಮಾತನಾಡಿದ ಅವರು ‘ತಾಲಿಬಾನ್ಗಳಿಗೆ ಶಾಂತಿ ನೆಲೆಸುವ ಇಚ್ಛೆಯಿಲ್ಲ ಎಂಬುದನ್ನು ಇದು ತೋರಿಸಿದೆ ಎಂದರು. ಪಿಕ್ಅಪ್ ಟ್ರಕ್ನಿಂದ ಈ ರಾಕೆಟ್ ಗಳನ್ನು ಉಡಾಯಿಸಿರುವ ಸಾಧ್ಯತೆಯಿದ್ದು ಒಂದು ರಾಕೆಟ್ ಸ್ಫೋಟಿಸಿಲ್ಲ ಎಂದು ಆಂತರಿಕ ವ್ಯವಹಾರ ಇಲಾಖೆಯ ವಕ್ತಾರರು ಹೇಳಿದ್ದಾರೆ.
ಕಳೆದ ವರ್ಷ ಘನಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭವೂ ಅಧ್ಯಕ್ಷರ ಅರಮನೆ ಮೇಲೆ ರಾಕೆಟ್ ದಾಳಿ ನಡೆದಿತ್ತು. ದೇಶದಲ್ಲಿ ತಾಲಿಬಾನ್ ಪಡೆಗಳ ನಿರ್ದಯ ಆಕ್ರಮಣ ಕೊನೆಗೊಳಿಸಲು ಶೀಘ್ರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾಬೂಲ್ನಲ್ಲಿರುವ 12ಕ್ಕೂ ಅಧಿಕ ರಾಜತಾಂತ್ರಿಕ ನಿಯೋಗ ಆಗ್ರಹಿಸಿದ ಮರುದಿನವೇ ಕಾಬೂಲ್ ಮೇಲೆ ರಾಕೆಟ್ ದಾಳಿ ನಡೆದಿದೆ.
ಒಂದೆಡೆ ಶಾಂತಿ ಮಾತುಕತೆಗೆ ತಾನು ಬದ್ಧ ಎಂದು ಹೇಳುತ್ತಿರುವ ತಾಲಿಬಾನ್, ಮತ್ತೊಂದೆಡೆ ಇದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದ್ದು ಸಾವಿರಾರು ಅಮಾಯಕ ಜನರು ಬಲಿಯಾಗುತ್ತಿದ್ದಾರೆ. ಹಲವರು ಗುಳೆ ಹೋಗಿದ್ದು ಸಾರ್ವಜನಿಕ ಆಸ್ತಿಪಾಸ್ತಿ, ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ ಎಂದು ರಾಜತಾಂತ್ರಿಕರು ನೀಡಿದ ಹೇಳಿಕೆಯಲ್ಲಿ ಆತಂಕ ಸೂಚಿಸಲಾಗಿದೆ.
ಈ ಮಧ್ಯೆ, ಅಪಘಾನಿಸ್ತಾನದಲ್ಲಿ ಸರಕಾರಿ ಪಡೆ ಹಾಗೂ ತಾಲಿಬಾನ್ ನಡುವಿನ ಸಂಘರ್ಷ ಮುಂದುವರಿದಿದ್ದು , ತಾವೇ ಮೇಲುಗೈ ಸಾಧಿಸಿರುವುದಾಗಿ ಉಭಯ ಪಕ್ಷಗಳೂ ಹೇಳಿಕೊಂಡಿವೆ.







