ಉತ್ತರಾಖಂಡ: ಹಿಮಪಾತದಿಂದ ಇದುವರೆಗೆ 80 ಸಾವು, 204 ಮಂದಿ ನಾಪತ್ತೆ
ಹೊಸದಿಲ್ಲಿ, ಜು.20: ಫೆಬ್ರವರಿ 7ರಂದು ಉತ್ತರಾಖಂಡದ ರಿಷಿಗಂಗಾ ನದಿಯಲ್ಲಿ ಸಂಭವಿಸಿದ ಹಿಮಪಾತದ ಬಳಿಕ ನದಿನೀರಿನ ಮಟ್ಟ ಹಠಾತ್ತಾಗಿ ಏರಿದ್ದು ಅಂದಿನಿಂದ ಇದುವರೆಗೆ ರಾಜ್ಯದಲ್ಲಿ 204 ಮಂದಿ ನಾಪತ್ತೆಯಾಗಿದ್ದು 80 ಮಂದಿ ಮೃತರಾಗಿದ್ದಾರೆ ಎಂದು ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಲಾಗಿದೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಅಲಖಾನಂದ ನದಿಯ ಉಪನದಿಯಾಗಿರುವ ರಿಷಿಗಂಗಾ ನದಿಯ ಮೇಲಿನ ಪಾತ್ರದಲ್ಲಿ ಉಂಟಾದ ಹಿಮಪಾತದಿಂದ ನದಿಯ ನೀರು ಏಕಾಏಕಿ ಏರಿ ಈ ದುರಂತಕ್ಕೆ ಕಾರಣವಾಗಿದೆ ಎಂದು ಲೋಕಸಭೆಯಲ್ಲಿ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ. ಹೀಗೆ ನೀರಿನ ಪ್ರಮಾಣ ಹಠಾತ್ ಏರಿಕೆಯಾಗಿದ್ದರಿಂದ , ನದಿಪಾತ್ರದ ಕೆಳಗಿನ ಪ್ರದೇಶವಾದ ತಪೋವನದಲ್ಲಿ 13.2 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಯೋಜನೆ ಹಾಗೂ ನಿರ್ಮಾಣ ಹಂತದಲ್ಲಿರುವ 520 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆ ಸಂಪೂರ್ಣ ಕೊಚ್ಚಿಕೊಂಡು ಹೋಗಿರುವುದಾಗಿ ರಾಜ್ಯ ಸರಕಾರ ಮಾಹಿತಿ ನೀಡಿದೆ ಎಂದು ಸಚಿವರು ಹೇಳಿದ್ದಾರೆ.
Next Story





