ಆರೋಗ್ಯ ಸೇವೆಯಲ್ಲಿ ಸಾಮಾಜಿಕ-ಆರ್ಥಿಕ ಅಸಮಾನತೆ: ಆಕ್ಸ್ ಫಾಮ್ ಇಂಡಿಯಾ ವರದಿಯಲ್ಲಿ ಬಹಿರಂಗ
ಹೊಸದಿಲ್ಲಿ, ಜು. 20: ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆ ಇಲ್ಲದೇ ಇರುವುದರಿಂದ ಆರೋಗ್ಯ ಕ್ಷೇತ್ರದಲ್ಲಿ ಸಾಮಾಜಿಕ-ಆರ್ಥಿಕ ಅಸಮಾನತೆ ಕಂಡು ಬಂದಿದೆ. ಅಲ್ಲದೆ, ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಆಕ್ಸ್ ಫಾಮ್ ಇಂಡಿಯಾದ ಹೊಸ ವರದಿ ಹೇಳಿದೆ.
‘‘ಆರೋಗ್ಯ ಸೌಲಭ್ಯದ ಲಭ್ಯತೆ ಹಾಗೂ ಆರೋಗ್ಯ ಸೂಚಕಗಳ ವಿಷಯಕ್ಕೆ ಬಂದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗಿಂತ ಸಾಮಾನ್ಯ ವರ್ಗ, ಮುಸ್ಲಿಮರಿಗಿಂತ ಹಿಂದೂಗಳು, ಬಡವರಿಗಿಂತ ಶ್ರೀಮಂತರು, ಗ್ರಾಮೀಣ ಪ್ರದೇಶಗಳ ಜನರಿಗಿಂತ ನಗರ ಪ್ರದೇಶದ ಜನರು, ಮಹಿಳೆಯರಿಗಿಂತ ಪುರುಷರು ಉತ್ತಮವಾಗಿದ್ದಾರೆ’’ ಎಂದು ಆಕ್ಸ್ ಫಾಮ್ ಇಂಡಿಯಾದ ವರದಿ ‘‘ಇಂಡಿಯಾ ಇನ್ಇಕ್ವಾಲಿಟಿ ರಿಪೋರ್ಟ್-2021: ಇಂಡಿಯಾಸ್ ಅನ್ಈಕ್ವಲ್ ಹೆಲ್ತ್ಕ್ಯಾರ್ ಸ್ಟೋರಿ’’ ಹೇಳಿದೆ.
ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಸಂದರ್ಭ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವೆ ವಿಭಜನೆಯಾಗಿದೆ. ಗ್ರಾಮೀಣ ಪ್ರದೇಶಗಳು ಪರೀಕ್ಷೆ, ಆಮ್ಲಜನಕ ಹಾಗೂ ಆಸ್ಪತ್ರೆಯ ಹಾಸಿಗೆಗಳ ಕೊರತೆಗೆ ಸಾಕ್ಷಿಯಾಗಿವೆ ಎಂದು ವರದಿ ಗಮನ ಸೆಳೆದಿದೆ. ‘‘ಎರಡನೇ ಅಲೆಯ ಬಳಿಕವೂ ಭಾರತದ ಸಾರ್ವಜನಿಕ ಆರೋಗ್ಯ ಸೇವೆಗೆ ಮುಖ್ಯವಾಗಿ ಪ್ರಾಥಮಿಕ ಆರೋಗ್ಯ ಸೇವೆಗೆ ನಿರಂತರ ಕಡಿಮೆ ನಿಧಿ ಒದಗಿಸುತ್ತಿರುವುದರ ಬಗ್ಗೆ ಹಾಗೂ ಆರೋಗ್ಯ ಸೇವೆಗಳ ಸೌಲಭ್ಯದ ಕೊರತೆ ಬಗ್ಗೆ ಸರಕಾರ ಗಮನ ಹರಿಸಬೇಕಾಗಿದೆ. ಇಲ್ಲದೇ ಇದ್ದರೆ, ಆರೋಗ್ಯ ತುರ್ತು ಸೇವೆಗಳಲ್ಲಿ ಈಗ ಅಸ್ತಿತ್ವದಲ್ಲಿರುವ ಅಸಮಾನತೆ ಇನ್ನಷ್ಟು ಉಲ್ಬಣಗೊಳ್ಳಲಿದೆ. ಅಲ್ಲದೆ ಬಡವರು ಹಾಗೂ ಅಂಚಿನಲ್ಲಿ ಇರುವವರಿಗೆ ಹೆಚ್ಚು ಸಮಸ್ಯೆ ಉಂಟಾಗಲಿದೆ. ಆರೋಗ್ಯ ಸೇವೆಯನ್ನು ಸಾಂವಿಧಾನಿಕ ಹಕ್ಕು ಎಂದು ಘೋಷಿಸುವ ಮೂಲಕ ಈ ಅಂತರ ನಿವಾರಿಸಬಹುದು’’ ಎಂದು ಆಕ್ಸ್ ಫಾಮ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮಿತಾಬ್ ಬೆಹಾರ್ ಹೇಳಿದ್ದಾರೆ.
ಭಾರತದ ಹಲವು ಆರೋಗ್ಯ ಸೂಚಕಗಳಲ್ಲಿ ಪ್ರಗತಿ ಕಂಡು ಬಂದರೂ ವಿವಿಧ ಸಾಮಾಜಿಕ-ಆರ್ಥಿಕ ಗುಂಪುಗಳ ನಡುವೆ ಅಸಮಾನತೆಯನ್ನು ವರದಿ ಗುರುತಿಸಿದೆ. ಮಹಿಳೆಯರ ಸಾಕ್ಷರತೆ ಪ್ರಮಾಣ ಕಳೆದ ಒಂದು ವರ್ಷದಲ್ಲಿ ಸುಧಾರಿಸಿದೆ, ಆದರೆ, ಸಾಕ್ಷರತೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರು ಸಾಮಾನ್ಯ ವರ್ಗದ ಮಹಿಳೆಯರಿಗಿಂತ ಹಿಂದುಳಿದಿದ್ದಾರೆ. ಸಾಕ್ಷರತೆ ಪ್ರಮಾಣದಲ್ಲಿ ಸಾಮಾನ್ಯ ಮಹಿಳೆಯರು ಶೇ. 18.6 ಹಿಂದುಳಿದಿದ್ದರೆ, ಪರಿಶಿಷ್ಟ ಜಾತಿ, ಪಂಗಡದ ಮಹಿಳೆಯರು ಶೇ. 27.9ರಷ್ಟು ಹಿಂದುಳಿದಿದ್ದಾರೆ. ಮುಂದುವರಿದು ಈ ವರದಿ ಸಾಮಾಜಿಕ ಗುಂಪುಗಳಲ್ಲಿ ಶಿಶು ಮರಣ ಪ್ರಮಾಣ ಸುಧಾರಣೆ ಅಸಮಾನವಾಗಿದೆ ಎಂದು ಹೇಳಿದೆ.
ದಲಿತರು, ಆದಿವಾಸಿಗಳು ಹಾಗೂ ಇತರ ಹಿಂದುಳಿದ ವರ್ಗಗಳಲ್ಲಿ ಸಾಮಾನ್ಯ ವರ್ಗಕ್ಕೆ ಹೋಲಿಸಿದರೆ ಹೆಚ್ಚು ಶಿಶು ಮರಣ ಪ್ರಮಾಣ ಇದೆ. ಆದಿವಾಸಿಗಳಲ್ಲಿ ಶೇ. 44.4 ಶಿಶು ಮರಣ ಪ್ರಮಾಣ ಇದೆ. ಇದು ಸಾಮಾನ್ಯ ವರ್ಗಕ್ಕಿಂತ ಶೇ. 40 ಹೆಚ್ಚು. ಅಲ್ಲದೆ, ರಾಷ್ಟ್ರೀಯ ಸರಾಸರಿಗಿಂತ ಶೇ. 10 ಹೆಚ್ಚು ಎಂದು ಆಕ್ಸ್ಫಾಮ್ ಇಂಡಿಯಾ ವರದಿ ಹೇಳಿದೆ. ನಿರಂತರ ಕಡಿಮೆ ನಿಧಿ ಒದಗಿಸುವುದು ಕೂಡ ಭಾರತೀಯ ಆರೋಗ್ಯ ಸೇವೆಯ ಒಂದು ದೊಡ್ಡ ಸಮಸ್ಯೆ ಎಂದು ವರದಿ ಹೇಳಿದೆ. ‘‘2010 ಹಾಗೂ 2020ರ ನಡುವೆ 10 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಯ ಬೆಡ್ಗಳ ಸಂಖ್ಯೆ ಶೇ. 9ರಿಂದ 5ಕ್ಕೆ ಇಳಿಕೆಯಾಗಿದೆ. ಪ್ರಸಕ್ತ ಭಾರತ ಹಾಸಿಗೆ ಲಭ್ಯವಿರುವ 167 ರಾಷ್ಟ್ರಗಳಲ್ಲಿ 155ನೇ ಸ್ಥಾನದಲ್ಲಿದೆ. ಭಾರತದಲ್ಲಿ 10 ಸಾವಿರ ಜನಸಂಖ್ಯೆಗೆ 5 ಬೆಡ್ಗಳು ಹಾಗೂ 8.6 ವೈದ್ಯರು ಇದ್ದಾರೆ. ಗ್ರಾಮೀಣ ಭಾರತದಲ್ಲಿ ಶೇ. 70ರಷ್ಟು ಜನರು ವಾಸವಾಗಿದ್ದು, ದೇಶದಲ್ಲಿ ಅವರಿಗೆ ಶೇ. 40 ಹಾಸಿಗಳು ಲಭ್ಯವಿವೆ’’ ಎಂದು ಆಕ್ಸ್ಫಾಮ್ ಇಂಡಿಯಾದ ವರದಿ ಹೇಳಿದೆ.







