ಕ್ಷಮೆಯಾಚಿಸದೆ ನವಜೋತ್ ಸಿಧು ಅವರನ್ನು ಅಮರಿಂದರ್ ಸಿಂಗ್ ಭೇಟಿಯಾಗುವುದಿಲ್ಲ: ಮಾಧ್ಯಮ ಸಲಹೆಗಾರ

photo: Indian express
ಚಂಡೀಗಡ: ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ವಿರುದ್ದ ವಾಗ್ದಾಳಿ ಮಾಡಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವ ತನಕ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ತಮ್ಮ ಪ್ರತಿಸ್ಪರ್ಧಿ ಹಾಗೂ ರಾಜ್ಯ ಕಾಂಗ್ರೆಸ್ ಘಟಕಕ್ಕೆ ಹೊಸದಾಗಿ ನೇಮಕಗೊಂಡ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಭೇಟಿಯಾಗುವುದಿಲ್ಲ ಎಂದು ಸಿಂಗ್ ಅವರ ಮಾಧ್ಯಮ ಸಲಹೆಗಾರ ಮಂಗಳವಾರ ರಾತ್ರಿ ಟ್ವೀಟಿಸಿದರು. ಈ ಮೂಲಕ ಉಭಯ ನಾಯಕರ ನಡುವಿನ ದೀರ್ಘಕಾಲದ ಜಗಳಕ್ಕೆ ಮತ್ತೊಂದು ತಿರುವು ಲಭಿಸಿದೆ.
ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಭಡ್ತಿ ಪಡೆದ ನಂತರ ಸಿಧು ಅವರು ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಸಮಯ ಕೋರಿದ್ದಾರೆ ಎಂಬ ವರದಿಗಳನ್ನು ಸಿಂಗ್ ಅವರ ಮಾಧ್ಯಮ ಸಲಹೆಗಾರ ತಳ್ಳಿಹಾಕಿದರು.
ಇಂತಹ ವರದಿ ಸುಳ್ಳು. ಭೇಟಿಗೆ ಸಮಯವನ್ನು ಕೋರಲಾಗಿಲ್ಲ. ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ…ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಸಾಮಾಜಿಕ ಮಾಧ್ಯಮದಲ್ಲಿ ವೈಯಕ್ತಿಕವಾಗಿ ಮಾಡಿರುವ ಅವಹೇಳನಕಾರಿ ವಾಗ್ದಾಳಿಗೆ ಕ್ಷಮೆಯಾಚಿಸುವವರೆಗೂ ಸಿಎಂ, ಸಿಧು ಅವರನ್ನು ಭೇಟಿ ಆಗುವುದಿಲ್ಲ'' ಎಂದು ಮಾಧ್ಯಮ ಸಲಹೆಗಾರ ರವೀನ್ ಥುಕ್ರಲ್ ಟ್ವೀಟಿಸಿದ್ದಾರೆ.
ಅಮರಿಂದರ್ ಸಿಂಗ್ ಹಾಗೂ ನವಜೋತ್ ಸಿಧು ಅವರ ಮಧ್ಯೆ 2017 ರ ಚುನಾವಣೆಯ ಬಳಿಕ ಭಿನ್ನಾಭಿಪ್ರಾಯ ಮೂಡಿದೆ. ಸಿಧು ತನ್ನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಆಶಿಸಿದರು. ಆದರೆ ಆ ಕ್ರಮವನ್ನು ಸಿಂಗ್ ಅವರು ತಡೆದಿದ್ದಾರೆ ಎಂದು ವರದಿಯಾಗಿದೆ.
2017 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಸ್ಟಾರ್ ಪ್ರಚಾರಕರಾಗಿದ್ದ ಸಿಧು ಅವರು ಅಮರಿಂದರ್ ಸಿಂಗ್ ಸರಕಾರದಲ್ಲಿ ಡಿಸಿಎಂ ಬದಲಾಗಿ ಸಚಿವರಾದರು. ಆದರೆ ಎರಡು ವರ್ಷಗಳ ನಂತರ ಸಚಿವ ಸ್ಥಾನವನ್ನು ತ್ಯಜಿಸಿದರು.
Reports of @sherryontop seeking time to meet @capt_amarinder are totally false. No time has been sought whatsoever. No change in stance... CM won’t meet #NavjotSinghSidhu till he publicly apologises for his personally derogatory social media attacks against him. pic.twitter.com/VBvGzUsZe6
— Raveen Thukral (@RT_MediaAdvPBCM) July 20, 2021







