ಮಂಗಳೂರು: ನಕಲಿ ಪಾಸ್‌ಪೋರ್ಟ್ ಬಳಕೆ ಪ್ರಕರಣ; ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮಂಗಳೂರು, ಜು.20: ನಕಲಿ ಪಾಸ್‌ಪೋರ್ಟ್ ಬಳಕೆ ಪ್ರಕರಣದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಲೀಧರ ಪೈ ಬಿ. ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಕಾಸರಗೋಡು ಜಿಲ್ಲೆಯ ಕಾಞಂಗಾಡ್ ನಿವಾಸಿ ಅಬ್ದುಲ್ ಬಶೀರ್ (45) ಶಿಕ್ಷೆಗೊಳಗಾದ ಆರೋಪಿ.
ಇವರು 2010ರ ಆಗಸ್ಟ್ 17ರಂದು ಬೇರೊಬ್ಬರ ಪಾಸ್‌ಪೋರ್ಟ್‌ಗೆ ತನ್ನ ಭಾವಚಿತ್ರವನ್ನು ಲಗತ್ತಿಸಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬೈಗೆ ತೆರಳಿದ್ದ. ದುಬೈನಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭ ಸಿಕ್ಕಿಬಿದ್ದ ಈತನನ್ನು ಮಂಗಳೂರಿಗೆ ವಾಪಸ್ ಕಳುಹಿಸಿದ್ದರು. ಇಲ್ಲಿ ಪಾಸ್‌ಪೋರ್ಟ್ ಕಾಯ್ದೆಯ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಸಹಕರಿಸಿದ ಉಕ್ಕಾಸ್, ಮುಹಮ್ಮದ್ ಕುಂಞಿ ಮತ್ತು ಮುನೀರ್ ಕೆ. ಎಂಬವರ ವಿರುದ್ಧ ಕೂಡ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಅಬ್ದುಲ್ ಬಶೀರ್ ವಿಚಾರಣೆಗೆ ಹಾಜರಾಗಿದ್ದ. ಉಳಿದವರು ತಲೆಮರೆಸಿಕೊಂಡಿದ್ದರು. ಹಾಗಾಗಿ ಪ್ರಕರಣವನ್ನು ವಿಭಜಿಸಿ ಅಬ್ದುಲ್ ಬಶೀರ್‌ನನ್ನು ವಿಚಾರಣೆಗೊಳಪಡಿಸಲಾಗಿತ್ತು.
ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಹಿರಿಯ ನ್ಯಾಯಿಕ ದಂಡಾಧಿಕಾರಿ 2019ರ ಫೆಬ್ರವರಿ 19ರಂದು ಅಬ್ದುಲ್ ಬಶೀರ್ ಬಿಡುಗಡೆಗೆ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಸರಕಾರದ ಪರವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಲೀಧರ ಪೈ ಬಿ. ಆರೋಪಿಗೆ ನಾಲ್ಕು ಅಪರಾಧಗಳಿಗೆ ತಲಾ 1 ವರ್ಷ ಶಿಕ್ಷೆ ಮತ್ತು 1,000 ರೂ. ದಂಡ ವಿಧಿಸಿ (ಏಕಕಾಲದಲ್ಲಿ ಅನುಭವಿಸುವಂತೆ) ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದಾರೆ.







