ಮುದೂರು: ಕಟ್ಟಡ-ಇತರೆ ನಿರ್ಮಾಣ ಕಾರ್ಮಿಕರ ಸಮಾವೇಶ

ಬೈಂದೂರು, ಜು.20: ಜಡ್ಕಲ್ ಗ್ರಾಪಂ ವ್ಯಾಪ್ತಿಯ ಮುದೂರು ಗ್ರಾಮದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮಾವೇಶವು ಸ್ಥಳೀಯ ಕಾರ್ಮಿಕ ಮುಖಂಡ ಜೊಸೆಪ್ ಸಾಮ್ಯುಯಲ್ ಮನೆ ವಠಾರದಲ್ಲಿ ಇತ್ತೀಚೆಗೆ ಜರಗಿತು.
ಸಮಾವೇಶವನ್ನು ಉದ್ಘಾಟಿಸಿದ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ ತೊಂಡೆಮಕ್ಕಿ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಕೊರೊನ ಪರಿಹಾರದ ಆಹಾರ ಕಿಟ್ ವಿತರಣೆಯಲ್ಲಾಗಿರುವ ತಾರತಮ್ಯ ಹಾಗೂ ಎಲ್ಲಾ ಕಟ್ಟಡ ಕಾರ್ಮಿಕರನ್ನು ಗುರುತಿಸದೆ ಏಕಪಕ್ಷೀಯವಾಗಿ ವಿತರಣೆ ಮಾಡಿದ ಕ್ರಮ ಖಂಡನೀಯ ಎಂದು ಟೀಕಿಸಿದರು.
ಕಾರ್ಮಿಕ ಮುಖಂಡ ವೆಂಕಟೇಶ್ ಕೋಣಿ ಮಾತನಾಡಿ, ಗ್ರಾಮೀಣ ಪ್ರದೇಶದ ಬಡರೈತ, ಕೃಷಿಕೂಲಿಕಾರರು ಅನಧಿಕೃತವಾಗಿ ಆಕ್ರಮಿಸಿದ ಸರಕಾರಿ ಜಮೀನುಗಳಿಗೆ ಅಕ್ರಮ ಸಕ್ರಮೀಕರಣ ಕೋರಿ ಸಲ್ಲಿಸಿದ ಅರ್ಜಿಗಳನ್ನು ಡೀಮ್ಡ್ ಅರಣ್ಯ ನೆಪ ಹೇಳಿ ತಿರಸ್ಕರಿಸಿರುವುದನ್ನು, ರೈತಪರ ಕಾನೂನು ತಿದ್ದುಪಡಿ ಮಾಡಿ, ಹಕ್ಕು ಪತ್ರ ಕೊಡಿಸಬೇಕು ಎಂದು ಆಗ್ರಹಿದರು.
ಮುದೂರು ಕಟ್ಟಡ ಕಾರ್ಮಿಕರ ಸಂಘದ ನೂತನ ಕಾರ್ಯಕಾರಿ ಸಮಿತಿಗೆ ಶಂಕರ್ ಭೋವಿ ಅಧ್ಯಕ್ಷರಾಗಿ, ಇಮ್ಯಾನುವೆಲ್ ಯಾಕೂಬ್ ಕಾರ್ಯದರ್ಶಿ ಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಶಂಕರ್ ಭೋವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆನಂದ ಭೋವಿ ವಂದಿಸಿದರು.







