ಭಾರತವನ್ನು ಸೋಲಿನ ದವಡೆಯಿಂದ ಪಾರು ಮಾಡಿದ ದೀಪಕ್ ಚಹಾರ್
ಶ್ರೀಲಂಕಾ ವಿರುದ್ದ 2ನೇ ಪಂದ್ಯದಲ್ಲಿ ಜಯ, ಸರಣಿ ಕೈವಶ
photo: twitter/@VVSLaxman281
ಕೊಲಂಬೊ, ಜು.20: ದೀಪಕ್ ಚಹಾರ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕಗಳ ಕೊಡುಗೆಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ 2ನೇ ಪಂದ್ಯವನ್ನು 3 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಗೆಲ್ಲಲು 276 ರನ್ ಗುರಿ ಪಡೆದ ಭಾರತವು 49.1 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾವು ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿದರೂ ಗೆಲುವು ಸಾಧಿಸಲು ವಿಫಲವಾಯಿತು.
ರೋಚಕ ಗೆಲುವಿನ ಮೂಲಕ ಭಾರತವು 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಗೆದ್ದುಕೊಂಡಿತು.
ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್ ಅರ್ಧಶತಕದ ಕೊಡುಗೆ(53, 44 ಎಸೆತ, 6 ಬೌಂಡರಿ) ನೀಡಿದ ಹೊರತಾಗಿಯೂ ಭಾರತವು 27ನೇ ಓವರ್ ನಲ್ಲಿ 160 ರನ್ ಗೆ 6 ವಿಕೆಟ್ ಗಳನ್ನು ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಆಗ ತಂಡಕ್ಕೆ ಆಸರೆಯಾದ ದೀಪಕ್ ಚಹಾರ್(ಔಟಾಗದೆ 69, 82 ಎಸೆತ, 7 ಬೌಂಡರಿ, 1 ಸಿಕ್ಸರ್ ) ಮೊದಲಿಗೆ ಕೃನಾಲ್ ಪಾಂಡ್ಯ(35)ಅವರೊಂದಿಗೆ 7ನೇ ವಿಕೆಟಿಗೆ 33 ರನ್ ಜೊತೆಯಾಟ ನಡೆಸಿ ಗೆಲುವಿನ ಆಸೆ ಮೂಡಿಸಿದರು.
ಪಾಂಡ್ಯ ಔಟಾದ ಬಳಿಕ ಭುವನೇಶ್ವರ ಕುಮಾರ್ (ಔಟಾಗದೆ 19) ಅವರೊಂದಿಗೆ ಕೈಜೋಡಿಸಿದ ಚಹಾರ್ 8ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 84 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.