ಸಿದ್ಧಲಿಂಗಯ್ಯ ಸಮಾಜವನ್ನು ಪ್ರಭಾವಿಸಿದ ಕವಿ: ಪ್ರೊ. ವಿವೇಕ ರೈ

ಕೊಣಾಜೆ: ಕವಿ ಸಿದ್ಧಲಿಂಗಯ್ಯ ಅವರಿಗಿಂತ ಹೆಚ್ಚು ಬರೆದವರಿರಬಹುದು, ಸಾಹಿತ್ಯಕ ಮೌಲ್ಯವುಳ್ಳದ್ದನ್ನು ಬರೆದವರಿರಬಹುದು. ಆದರೆ ಸಾಮಾಜಿಕವಾಗಿ ಅವರಷ್ಟು ಪ್ರಭಾವಶಾಲಿಯಾದ ಕವಿಯನ್ನು ಹುಡುಕುವುದು ಕಷ್ಟ. ವಯಸ್ಸಿನಲ್ಲಿ ಕಿರಿಯನಾಗಿದ್ದರೂ ಲಂಕೇಶ್, ತೇಜಸ್ವಿ, ಕಂಬಾರರಂತಹ ಮಹತ್ವದ ಲೇಖಕರನ್ನೂ ಒಳಗೊಂಡಂತೆ ಇಡೀ ಕನ್ನಡನಾಡನ್ನು ಹೊಸಬಗೆಯಲ್ಲಿ ಯೋಚಿಸುವಂತೆ ಮಾಡಿದ ಶಕ್ತಿ ಸಿದ್ಧಲಿಂಗಯ್ಯ ಅವರಲ್ಲಿ ಇತ್ತು ಎಂದು ಪ್ರೊ. ಬಿ.ಎ ವಿವೇಕ ರೈ ಹೇಳಿದರು.
ಅವರು ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆ ಏರ್ಪಡಿಸಿದ ಡಾ.ಸಿದ್ಧಲಿಂಗಯ್ಯ ಅವರ ಬದುಕು ಬರಹದ ಕುರಿತ ವಿಚಾರಸಂಕಿರಣದಲ್ಲಿ ಆಶಯ ಭಾಷಣ ಮಾಡಿದರು.
ಸದಾ ಬಡವರ ಪರವಾಗಿ, ದೀನ ದಲಿತರ ಪರವಾಗಿ ಬರವಣಿಗೆ, ಹೋರಾಟದಲ್ಲಿ ತೊಡಗಿಕೊಂಡಿದ್ದ ಸಿದ್ಧಲಿಂಗಯ್ಯನವರಿಗೆ ನಾಸ್ತಿಕತೆ, ಆಸ್ತಿಕತೆಯ ಚರ್ಚೆಗಳು ಗೌಣವಾಗಿದ್ದು ಮಾನವೀಯತೆಯೇ ಮುಖ್ಯ ಗುಣವೆಂಬ ಭಾವನೆಯಿತ್ತು ಎಂದು ಹೇಳಿದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಮಂಗಳೂರು ವಿವಿಯ ಕುಲಪತಿಗಳಾದ ಪ್ರೊ. ಪಿ.ಎಸ್ ಯಡಪಡಿತ್ತಾಯ ಅವರು ಮಾತನಾಡಿ ‘ಸಿದ್ಧಲಿಂಗಯ್ಯನವರು ಮಹಾನ್ ಮಾನವತಾವಾದಿಯಾಗಿದ್ದರು. ಹಾಸ್ಯಪ್ರಜ್ಞೆ ಹೊಂದಿದ್ದ ಆದರೆ ಅನ್ಯಾಯವನ್ನು ನಿಷ್ಠುರವಾಗಿ ಎದುರಿಸಿದ ವ್ಯಕ್ತಿ ಅವರು. ತಮ್ಮ ಕವಿತೆಗಳ ಮೂಲಕ ಕನ್ನಡ ನಾಡು ಆತ್ಮಾವಲೋಕನ ಮಾಡುವಂತೆ ಮಾಡಿದರು’ ಎಂದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಯಿ ಮಾತನಾಡಿ ಅಜಲು ಪದ್ಧತಿಯಂತಹ ಸಾಮಾಜಿಕ ಅನಿಷ್ಠವನ್ನು ಸಮಾಜದಿಂದ ದೂರಮಾಡಿದ, ದಲಿತರ ಸಮಸ್ಯೆಗಳಿಗೆ ಸ್ಪಂದಿಸಿದ ಸಿದ್ಧಲಿಂಗಯ್ಯನವರ ಊರುಕೇರಿ ಆತ್ಮಕಥನ ಭಾರತೀಯ ಸಾಹಿತ್ಯದಲ್ಲೇ ಅಪೂರ್ವ ಕೃತಿ ಎಂದರು. ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ ಸಿದ್ದಲಿಂಗಯ್ಯನವರ ಕಾವ್ಯದ ಕುರಿತು ಮಾತನಾಡಿ ಕನ್ನಡಕ್ಕೆ ಹೋರಾಟದ ಹಾಡುಗಳ ವಿಶಿಷ್ಟ ಕಾವ್ಯಪ್ರಕಾರವನ್ನು ಕೊಡುಗೆಯಾಗಿ ನೀಡಿದ ಕವಿ ಎಂದರು. ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಅಭಯ ಕುಮಾರ್, ಪ್ರೊ. ಸಬಿಹಾ ಭಾಗವಹಿಸಿದ್ದರು.
ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ಸೋಮಣ್ಣ ಹೊಂಗಳ್ಳಿ ಸ್ವಾಗತಿಸಿದರು. ಡಾ. ಧನಂಜಯ ಕುಂಬ್ಳೆ ನಿರೂಪಿಸಿದರು. ಡಾ. ನಾಗಪ್ಪ ಗೌಡ ವಂದಿಸಿದರು. ಡಾ. ಯಶುಕುಮಾರ್ ಮತ್ತು ವಿದ್ಯಾರ್ಥಿ ರಾಮಾಂಜಿ ಸಿದ್ಧಲಿಂಗಯ್ಯನವರ ಕವಿತೆಗಳನ್ನು ವಾಚಿಸಿದರು.







