ಕೇಂದ್ರ ಐಟಿ ಸಚಿವರಿಂದ ಪೆಗಾಸಸ್ ಕುರಿತ ಹೇಳಿಕೆಯ ಕಾಗದ ಕಸಿದು ಎಸೆದ ತೃಣಮೂಲ ಕಾಂಗ್ರೆಸ್ ಸಂಸದ

ಅಶ್ವಿನಿ ವೈಷ್ಣವ್ (Twitter/@ANI)
ಹೊಸದಿಲ್ಲಿ: ಮುಂಗಾರು ಅಧಿವೇಶನದಲ್ಲಿ ಸತತ ಮೂರನೇ ದಿನ ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲೂ ಹೈ ಡ್ರಾಮಾ ಮುಂದುವರೆದಿದೆ. ಪ್ರತಿಪಕ್ಷದ ಸಂಸದರು ಪೆಗಾಸಸ್ ಗೂಢಚರ್ಯೆ ವಿವಾದ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಪ್ರತಿಭಟನೆ ನಡೆಸಿದರು.
ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರ ಗದ್ದಲದಿಂದಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಪೆಗಾಸಸ್ ಸ್ನೂಪಿಂಗ್ ವಿವಾದದ ಬಗ್ಗೆ ತಮ್ಮ ಹೇಳಿಕೆಯನ್ನು ಮೊಟಕುಗೊಳಿಸಬೇಕಾಯಿತು.
ಪೆಗಾಸಸ್ ಬಗ್ಗೆ ಹೇಳಿಕೆ ನೀಡಲು ವೈಷ್ಣವ್ ಎದ್ದ ಕೂಡಲೇ ತೃಣಮೂಲ ಸಂಸದ ಶಂತನು ಸೇನ್ ಅವರು ವೈಷ್ಣವ್ ಕೈಯಿಂದ ಹೇಳಿಕೆಯ ಕಾಗದವನ್ನು ಕಸಿದು ಉಪಾಧ್ಯಕ್ಷರ ಕಡೆಗೆ ಎಸೆದರು. ಗದ್ದಲದ ಹೊರತಾಗಿಯೂ ವೈಷ್ಣವ್ ಹೇಳಿಕೆ ನೀಡಲು ನಿರ್ಧರಿಸಿದರು.
ನಂತರ ರಾಜ್ಯಸಭೆಯನ್ನು ನಾಳೆಯವರೆಗೆ ಮುಂದೂಡಲಾಯಿತು. ಮೇಲ್ಮನೆಯಲ್ಲಿ ಮೂರನೇ ಬಾರಿ ಕಲಾಪ ಮುಂದೂಡಿಕೆಯಾಗಿದೆ.
"ಸಚಿವರ ವರ್ತನೆ ದುರದೃಷ್ಟಕರ. ರಾಜ್ಯಸಭೆಯಲ್ಲಿ ಕೋಲಾಹಲದ ನಡುವೆ ಐಟಿ ಸಚಿವರು ಹೇಳಿಕೆ ನೀಡಿದ ರೀತಿ ಪೆಗಾಸಸ್ ಬಗ್ಗೆ ಅಪಹಾಸ್ಯ ಮಾಡಲು ಮಾತ್ರ ಸರಕಾರ ಬಯಸಿದೆ ಎಂದು ಕಾಣುತ್ತದೆ" ಎಂದು ಆರ್ ಜೆಡಿ ಸಂಸದ ಮನೋಜ್ ಝಾ ಹೇಳಿದ್ದಾರೆ.
ಕಾಂಗ್ರೆಸ್ ಹಾಗೂ ಶಿರೋಮಣಿ ಅಕಾಲಿ ದಳದ ನಾಯಕರು ವಿವಾದಾತ್ಮಕ ಕೃಷಿ ಕಾನೂನುಗಳ ಮೇಲೆ ಸರಕಾರವನ್ನು ಗುರಿಯಾಗಿಸಿಕೊಂಡರೆ, ತೃಣಮೂಲ ಕಾಂಗ್ರೆಸ್ ಸದಸ್ಯರು ಸ್ಪೀಕರ್ ಪೀಠದ ಬಳಿ ಜಮಾಯಿಸಿ ಪೆಗಾಸಸ್ ಗೂಢಚರ್ಯೆ ವಿಚಾರವನ್ನು ಎತ್ತಿದರು. ಟಿಎಂಸಿ ಸಂಸದರು ಘೋಷಣೆಗಳನ್ನು ಕೂಗಿದರು ಹಾಗೂ ಪ್ರಧಾನಮಂತ್ರಿಯಿಂದ ಉತ್ತರಗಳನ್ನು ಕೋರಿದರು.







