ಅಂಚೆ ಇಲಾಖೆಯ ಹೊಸ ಯೋಜನೆ: ಮನೆ ಬಾಗಿಲಲ್ಲಿ ಆಧಾರ್ ಸಂಖ್ಯೆಗೆ ಮೊಬೈಲ್ ಜೋಡಣೆ
ಮಂಗಳೂರು, ಜು.22: ಆಧಾರ್ ಮೊಬೈಲ್ ಜೋಡಣೆಯ ಸೇವೆಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮತ್ತು ಯುಐಡಿಎಐ ಸಹಾಯ ದೊಂದಿಗೆ ಅಂಚೆ ಇಲಾಖೆಯು ತನ್ನ ಪೋಸ್ಟ್ ಮ್ಯಾನ್ ಸಿಬ್ಬಂದಿಯ ಮೂಲಕ ಮನೆ ಬಾಗಿಲಿಗೆ ತಲುಪಿಸುವ ಹೊಸ ಯೋಜನೆಯನ್ನು ರೂಪಿಸಿದೆ. ದ.ಕ.ಜಿಲ್ಲೆಯಲ್ಲಿ ಜು.15ರಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ 5 ವರ್ಷದೊಳಗಿನ ಮಕ್ಕಳ ಹೊಸ ಆಧಾರ್ ನೋಂದಣಿ ಕೂಡ ಪ್ರಾರಂಭಿಸಲಾಗುತ್ತದೆ.
ಅಂಚೆ ಇಲಾಖೆಯ ಸಿಬ್ಬಂದಿಯ ಬಳಿ ಇರುವ ಮೊಬೈಲ್ ಮೂಲಕ ಆಧಾರ್ ಜೋಡನೆ ಸೇವೆಯನ್ನು ನೀಡಲಾಗುತ್ತದೆ. ಈ ಸೇವೆಯ ಶುಲ್ಕ 50 ರೂ. ಆಗಿದೆ. ಆಧಾರ್ ಕಾರ್ಡ್‌ನಲ್ಲಿ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರನ್ನು ಜೋಡಿಸದೆ ಇರುವವರು ಮತ್ತು ಈಗಾಗಲೆ ಆಧಾರ್ ಕಾರ್ಡ್‌ನಲ್ಲಿ ಜೊಡಿಸಿರುವ ಮೊಬೈಲ್ ನಂಬರ್ ಬದಲಿಗೆ ಬೇರೆ/ಹೊಸ ಮೊಬೈಲ್ ನಂಬರ್ ಜೋಡಿಸಬಹುದಾಗಿದೆ. ಆಧಾರ್ ಕಾರ್ಡ್‌ನಲ್ಲಿ ಫೋಷಕರ ಮೊಬೈಲ್ ನಂಬರ್ ಜೋಡಿಸಿರುವ ವಿದ್ಯಾರ್ಥಿಗಳು ಈಗ ತಮ್ಮದೇ ಮೊಬೈಲ್ ಸಂಖ್ಯೆಯನ್ನು ಜೋಡಿಸಬಹುದಾಗಿದೆ.ಮೊಬೈಲ್ ಸಿಮ್ ಕಳೆದು ಹೋಗಿ ಬದಲಾಯಿಸಿದವರು, ಬೀಡಿ ಕಾರ್ಮಿಕರು /ಇತರರು ಪಿಎಫ್ ಸೌಲಭ್ಯ ಪಡೆಯುವ ಉದ್ದೇಶದಿಂದ ಆಧಾರ್‌ಗೆ ಮೊಬೈಲ್ ಸಂಖ್ಯೆಯನ್ನು ಜೋಡಿಸಬಹುದು. ಪಡಿತರ ಚೀಟಿಯಲ್ಲಿ ಒಟಿಪಿ ಬಾರದೆ ಸಮಸ್ಯೆ ಎದುರಿಸುವವರು, ಅಯುಷ್ಮಾನ್ ಭಾರತ್ ಕಾರ್ಡ್ ಪಡೆಯಲಿಚ್ಚಿಸುವವರು/ಆದಾಯ ವಿವರ ಸಲ್ಲಿಸುವವರಿಗೆ ಒಟಿಪಿ ಸಮಸ್ಯೆ ಇದ್ದಲ್ಲಿ ಇದರ ಪ್ರಯೋಜನ ಪಡೆಯಬಹುದು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಪ್ರಕಟನೆ ತಿಳಿಸಿದೆ.





