ನವಜೋತ್ ಸಿಧು ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಅಮರಿಂದರ್ ಸಿಂಗ್ ಒಪ್ಪಿಗೆ, ವದಂತಿಗೆ ತೆರೆ

ಚಂಡೀಗಡ: ಪಂಜಾಬ್ ಕಾಂಗ್ರೆಸ್ ನ ನೂತನ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಗುರುವಾರ ಒಪ್ಪಿಗೆ ಸೂಚಿಸಿದ್ದು, ಅವರು ಈ ಕಾರ್ಯಕ್ರಮವನ್ನು ಬಹಿಷ್ಕರಿಸಬಹುದೆಂಬ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ. ಸಮಾರಂಭವು ಶುಕ್ರವಾರ ನಡೆಯಲಿದೆ.
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ (ಪಿಪಿಸಿಸಿ) ನಾಲ್ವರು ಕಾರ್ಯಕಾರಿ ಅಧ್ಯಕ್ಷರಲ್ಲಿ ಇಬ್ಬರಾಗಿರುವ ಕುಲ್ಜಿತ್ ಸಿಂಗ್ ನಾಗ್ರಾ ಹಾಗೂ ಸಂಗತ್ ಸಿಂಗ್ ಗಿಲ್ಜಿಯಾನ್ ಅವರು ಗುರುವಾರ ಮಧ್ಯಾಹ್ನ ಅಮರಿಂದರ್ ಅವರನ್ನು ಭೇಟಿಯಾಗಿ ಎರಡು ಆಹ್ವಾನಪತ್ರವನ್ನು ನೀಡಿದರು. ಒಂದರಲ್ಲಿ 50 ಕ್ಕೂ ಹೆಚ್ಚು ಶಾಸಕರು ಅನುಮೋದಿಸಿರುವ ಪತ್ರವಾಗಿದ್ದರೆ, ಮತ್ತೊಂದು ಸಿಧು ಅವರು ಬರೆದ ವೈಯಕ್ತಿಕ ಪತ್ರವಾಗಿತ್ತು. ಸಿಧು ಪತ್ರದ ಮೂಲಕ ಮುಖ್ಯಮಂತ್ರಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.
ಚಂಡೀಗಡದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಎಂ ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿಯನ್ನು ಭೇಟಿಯಾದ ನಂತರ ನಾಗ್ರಾ ಹೇಳಿದರು.
"ಪಂಜಾಬ್ ಸಿಎಂ ಪಂಜಾಬ್ ಭವನದಲ್ಲಿ ಎಲ್ಲಾ ಕಾಂಗ್ರೆಸ್ ಶಾಸಕರು, ಸಂಸದರು ಹಾಗೂ ಪಕ್ಷದ ಹಿರಿಯ ಕಾರ್ಯಕರ್ತರನ್ನು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಚಹಾಕ್ಕಾಗಿ ಆಹ್ವಾನಿಸಿದ್ದಾರೆ. ನಂತರ ಅವರು ಅಲ್ಲಿಂದ ಒಟ್ಟಿಗೆ ಹೊಸ ಪಿಪಿಸಿಸಿ ತಂಡದ ಸ್ಥಾಪನೆಗಾಗಿ ಪಂಜಾಬ್ ಕಾಂಗ್ರೆಸ್ ಭವನಕ್ಕೆ ಹೋಗುತ್ತಾರೆ’ ಎಂದು ಸಿಎಂ ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ಅವರು ಟ್ವೀಟಿಸಿದ್ದಾರೆ.







