ಅಧಿಕಾರದಲ್ಲಿ ಮುಂದುವರಿಯಲು ಬಿಜೆಪಿಗೆ ನೈತಿಕತೆ ಇಲ್ಲ: ಸಿದ್ದರಾಮಯ್ಯ

ಬೆಂಗಳೂರು, ಜು.22: ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಪಕ್ಷಕ್ಕೆ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಮುಂದುವರೆಯಲು ಯಾವುದೆ ನೈತಿಕತೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೂ ಬಿಜೆಪಿಯಿಂದ ಉತ್ತಮ ಸರಕಾರವನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ ಎಂದರು.
ಯಡಿಯೂರಪ್ಪ ಬಳಿಕ ಬಿಜೆಪಿಯಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಬಿಜೆಪಿ ಸರಕಾರ ಅಧಿಕಾರದಲ್ಲಿ ಇರುವುದಕ್ಕಿಂತ ತೊಲಗುವುದೇ ಒಳ್ಳೆಯದು. ಭ್ರಷ್ಟಾಚಾರದಲ್ಲಿ ತಲ್ಲೀನವಾಗಿರುವ ಯಡಿಯೂರಪ್ಪ, ಸಮ್ಮಿಶ್ರ ಸರಕಾರವನ್ನು ಕೆಡವಿದ್ದರು. ಅವರ ಪದಚ್ಯುತಿ ಆಗಲಿದೆ ಎಂದು ನನಗೆ ಖಚಿತ ಮಾಹಿತಿ ಇತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಕೋವಿಡ್‍ನಿಂದ ದೇಶದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ನಮಗೆ ಸರಕಾರ ಕೊಟ್ಟಿರುವ ಅಂಕಿ ಅಂಶಗಳಿಗಿಂತ 10 ಪಟ್ಟು ಜನ ಸತ್ತಿದ್ದಾರೆ. ಬಿಜೆಪಿಯ ದುರಾಡಳಿತ, ನಿರ್ಲಕ್ಷ್ಯದಿಂದಾಗಿ ಇಷ್ಟೊಂದು ಜನ ಸಾವನ್ನಪ್ಪುವಂತಾಯಿತು. ಕೋವಿಡ್‍ನಿಂದ ಮೃತಪಟ್ಟವರಿಗೆ ಕನಿಷ್ಠ ಪರಿಹಾರ ನೀಡಲು ಈ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಯಡಿಯೂರಪ್ಪ ಬದಲಾವಣೆ ವಿಚಾರಕ್ಕೂ ನಮಗೂ ಯಾವುದೆ ಸಂಬಂಧವಿಲ್ಲ. ಅದು ಅವರ ಪಕ್ಷದ ವಿಚಾರ. ಆದುದರಿಂದ, ನಾವು ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ ಎಂದರು.
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ಅನಾರೋಗ್ಯದ ಕಾರಣದಿಂದಾಗಿ ನಾಳೆ ಮಂಗಳೂರಿನಲ್ಲಿ ನಡೆಯಬೇಕಿದ್ದ ಪಕ್ಷದ ಸಭೆಯನ್ನು ರದ್ದುಗೊಳಿಸಲಾಗಿದೆ. ಆದರೆ, ತುಮಕೂರಿನ ಸಭೆ ನಡೆಯಲಿದೆ ಎಂದರು.







