ಭಾರತವು ಶ್ರೀಮಂತರು ಮತ್ತು ಬಡವರಿಗಾಗಿ ಸಮಾನಾಂತರ ಕಾನೂನು ವ್ಯವಸ್ಥೆಗಳನ್ನು ಹೊಂದಿರಲು ಸಾಧ್ಯವಿಲ್ಲ: ಸುಪ್ರೀಂ

ಹೊಸದಿಲ್ಲಿ, ಜು.22: ಭಾರತವು ಶ್ರೀಮಂತರು, ಸಂಪದ್ಭರಿತರು ಮತ್ತು ರಾಜಕೀಯ ಅಧಿಕಾರವನ್ನು ಹೊಂದಿರುವವರಿಗಾಗಿ ಒಂದು ಹಾಗೂ ಸಂಪನ್ಮೂಲಗಳಿಲ್ಲದ,ನ್ಯಾಯವನ್ನು ಪಡೆಯುವ ಸಾಮರ್ಥ್ಯವಿಲ್ಲದ ಬಡವರಿಗಾಗಿ ಇನ್ನೊಂದು,ಹೀಗೆ ಎರಡು ಸಮಾನಾಂತರ ಕಾನೂನು ವ್ಯವಸ್ಥೆಗಳನ್ನು ಹೊಂದಿರಲು ಸಾಧ್ಯವಿಲ್ಲ ಎಂಬ ಮಹತ್ವದ ಅಭಿಪ್ರಾಯವನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ವ್ಯಕ್ತಪಡಿಸಿದೆ.
ಜಿಲ್ಲಾಮಟ್ಟದ ನ್ಯಾಯಾಂಗದ ಮೇಲೆ ವಸಾಹತುಶಾಹಿ ಮನಃಸ್ಥಿತಿಯನ್ನು ಹೇರಲಾಗಿದ್ದು,ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ಉಳಿಸಿಕೊಳ್ಳಬೇಕೆಂದರೆ ಇದು ಬದಲಾಗಲೇಬೇಕು ಎಂದು ಹೇಳಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಎಂ.ಆರ್.ಶಾ ಅವರ ಪೀಠವು,ಸತ್ಯದ ಪರ ನಿಂತ ನ್ಯಾಯಾಧೀಶರನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ ಎಂದು ಬೆಟ್ಟು ಮಾಡಿತು.
ಎರಡು ವರ್ಷಗಳಷ್ಟು ಹಳೆಯ, ಕಾಂಗ್ರೆಸ್ ನಾಯಕ ದೇವೇಂದ್ರ ಚೌರಾಸಿಯಾ ಹತ್ಯೆ ಪ್ರಕರಣದಲ್ಲಿ ಮಧ್ಯಪ್ರದೇಶದ ಬಿಎಸ್‌ಪಿ ಶಾಸಕಿಯ ಪತಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸಿದ ವೇಳೆ ಸರ್ವೋಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಸ್ವತಂತ್ರ ಮತ್ತು ನಿಷ್ಪಕ್ಷ ನ್ಯಾಯಾಂಗವು ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ ಮತ್ತು ಅದು ರಾಜಕೀಯ ಒತ್ತಡಗಳು ಹಾಗೂ ಪರಿಗಣನೆಗಳಿಂದ ಮುಕ್ತವಾಗಿರಬೇಕು ಎಂದು ಅದು ಹೇಳಿತು.
ಭಾರತವು ಶ್ರೀಮಂತರು ಮತ್ತು ಬಲಾಢ್ಯರಿಗಾಗಿ ಒಂದು ಮತ್ತು ಬಡವರಿಗಾಗಿ ಇನ್ನೊಂದು ಹೀಗೆ ಎರಡು ಸಮಾನಾಂತರ ಕಾನೂನು ವ್ಯವಸ್ಥೆಗಳನ್ನು ಹೊಂದಿರಲು ಸಾಧ್ಯವಿಲ್ಲ. ಇಂತಹ ಜೋಡಿ ವ್ಯವಸ್ಥೆಯ ಅಸ್ತಿತ್ವವು ಕಾನೂನಿನ ನ್ಯಾಯಸಮ್ಮತತೆಯನ್ನು ದೂರ ಮಾಡುತ್ತದೆಯಷ್ಟೇ. ಕಾನೂನಿನ ಆಡಳಿತಕ್ಕೆ ಬದ್ಧವಾಗಿರುವ ಹೊಣೆಗಾರಿಕೆಯು ಸರಕಾರಿ ಯಂತ್ರದ ಮೇಲೆಯೂ ಇದೆ ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.
ನ್ಯಾಯಾಂಗದಲ್ಲಿ ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಕೆಳಹಂತದ ನ್ಯಾಯಾಂಗದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕಾಗುತ್ತದೆ ಎಂದ ಪೀಠವು,ವಿಚಾರಣಾ ನ್ಯಾಯಾಧೀಶರು ಭೀತಿಯ ಸ್ಥಿತಿ,ಮೂಲಸೌಕರ್ಯ ಮತ್ತು ಭದ್ರತೆಯ ಕೊರತೆಯ ನಡುವೆಯೇ ಕರ್ತವ್ಯವನ್ನು ನಿರ್ವಹಿಸುತ್ತಾರೆ ಮತ್ತು ಅವರು ಸತ್ಯದ ಪರವಾಗಿ ನಿಂತಾಗ ಅವರನ್ನು ಗುರಿಯಾಗಿಸಿಕೊಂಡ ಉದಾಹರಣೆಗಳಿವೆ ಎಂದು ಹೇಳಿತು. ಕೆಳಹಂತದ ನ್ಯಾಯಾಂಗವು ವರ್ಗಾವಣೆ ಮತ್ತು ನೇಮಕಾತಿಗಳಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯಗಳ ಆಡಳಿತದ ಅಧೀನದಲ್ಲಿರುವುದು ಅದನ್ನು ದುರ್ಬಲಗೊಳಿಸುತ್ತದೆ ಎನ್ನುವುದು ದುಃಖದ ವಿಷಯವಾಗಿದೆ ಎಂದು ಹೇಳಿತು.
ಜಿಲ್ಲಾ ನ್ಯಾಯಾಂಗದ ಮೇಲೆ ಹೇರಲಾಗಿರುವ ವಸಾಹತುಶಾಹಿ ಮನಃಸ್ಥಿತಿಯು ಬದಲಾದರೆ ಮಾತ್ರ ಅನ್ಯಾಯಕ್ಕೊಳಗಾದವರಿಗೆ ಮೊದಲ ಆಧಾರವಾಗಿರುವ ವಿಚಾರಣಾ ನ್ಯಾಯಾಲಯಗಳಲ್ಲಿ ಪ್ರಜೆಗಳ ನಾಗರಿಕ ಹಕ್ಕುಗಳು ಅರ್ಥಪೂರ್ಣವಾಗಿ ರಕ್ಷಿಸಲ್ಪಡುತ್ತವೆ ಎಂದೂ ಸರ್ವೋಚ್ಚ ನ್ಯಾಯಾಲಯವು ಹೇಳಿತು.







