ದೋಣಿಗಲ್‌ನಲ್ಲಿ ಹೆದ್ದಾರಿ ಕುಸಿತ: ಬದಲಿ ಮಾರ್ಗ ಬಳಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು, ಜು.22: ಶಿರಾಡಿ ಘಾಟಿ ಪ್ರದೇಶ ಮತ್ತು ಸಕಲೇಶಪುರ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇಲ್ಲಿನ ದೋಣಿಗಲ್ ಸಮೀಪ ಗುರುವಾರ ಹೆದ್ದಾರಿ ಕುಸಿದ ಪರಿಣಾಮ ಈ ಭಾಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಂಗಳೂರು- ಬೆಂಗಳೂರು ನಡುವೆ ಸಂಚರಿಸುವ ವಾಹನ ಸವಾರರು ಪರ್ಯಾಯ ಮಾರ್ಗ ಬಳಸಿ ತೆರಳಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರು-ಮಂಗಳೂರು ಸಂಚರಿಸುವ ವಾಹನ ಸವಾರರು ವಯಾ ಚಾರ್ಮಾಡಿ, ವಯಾ ಸಂಪಾಜೆ ಅಥವಾ ಬಿಸಿಲೆ ಘಾಟ್ ಮೂಲಕ ಸಂಚರಿಸಬೇಕು ಎಂದವರು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಹೆದ್ದಾರಿ ಸಂಚಾರ ತಡೆಹಿಡಿಯಲ್ಪಟ್ಟದ್ದರಿಂದ ಈ ಮಾರ್ಗದಲ್ಲಿ ಸಾಗುತ್ತಿದ್ದ ವಾಹನಗಳನ್ನು ಗುಂಡ್ಯದಲ್ಲಿ ಗೇಟ್ ಹಾಕಿ ತಡೆಹಿಡಿಯಲಾಗಿತ್ತು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಭಾರೀ ಮಳೆಯಾಗುತ್ತಿರುವ ಕಾರಣ ಈ ಭಾಗದಲ್ಲಿ ಗುಡ್ಡ ಕುಸಿತವಾಗುವ ಸಾಧ್ಯತೆಯೂ ಇದ್ದು, ವಾಹನ ಸವಾರರು ಅನ್ಯ ಮಾರ್ಗವನ್ನು ಬಳಸುವುದು ಒಳಿತು ಎಂದು ಅವರು ತಿಳಿಸಿದ್ದಾರೆ.





