ಶಾಂತಿಯುತವಾಗಿ ಮುಗಿದ ಎಸೆಸೆಲ್ಸಿ ಪರೀಕ್ಷೆ: ಶೇ.99.9 ಹಾಜರಾತಿ

ಉಡುಪಿ, ಜು. 22: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೂರು ಭಾಷಾ ವಿಷಯಗಳ ಪರೀಕ್ಷೆಗಳು ಗುರುವಾರ ಬೆಳಗ್ಗೆ 10:30ರಿಂದ ಅಪರಾಹ್ನ 1:30ರವರೆಗೆ ಜಿಲ್ಲೆಯ 77 ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿಯುತವಾಗಿ ಯಾವುದೇ ಅಹಿತಕರ ಘಟನೆಗಳಿಲ್ಲದೇ ಮುಕ್ತಾಯ ಗೊಂಡಿದ್ದು, ಜಿಲ್ಲೆಯ 259 ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ತಿಳಿಸಿದ್ದಾರೆ.
ಪ್ರಥಮ ಭಾಷೆ, ದ್ವಿತೀಯ ಭಾಷೆ ಹಾಗೂ ತೃತೀಯ ಭಾಷಾ ಪರೀಕ್ಷೆಗಳಲ್ಲಿ ನೊಂದಾಯಿತ ರೆಗ್ಯುಲರ್ ವಿದ್ಯಾರ್ಥಿಗಳಲ್ಲಿ ಕ್ರಮವಾಗಿ 14, 13, 13 ಮಂದಿ ಗೈರುಹಾಜರಾಗಿದ್ದು, ಶೇ.99.90 ಮಂದಿ ಪರೀಕ್ಷೆಯನ್ನು ಬರೆದಿದ್ದಾರೆ. ಖಾಸಗಿ ವಿದ್ಯಾರ್ಥಿಗಳಲ್ಲಿ ತಲಾ ಒಬ್ಬರು ಗೈರುಹಾಜರಾದರೆ ಶೇ.99.51 ಮಂದಿ ಪರೀಕ್ಷೆ ಬರೆದಿದ್ದಾರೆ. ಮರುಪರೀಕ್ಷೆ ಬರೆದವರಲ್ಲೂ ಒಟ್ಟು ನಾಲ್ವರು ಗೈರಾಗಿದ್ದಾರೆ ಎಂದವರು ಹೇಳಿದ್ದಾರೆ.
ಜಿಲ್ಲೆಯ 77 ಕೇಂದ್ರಗಳಲ್ಲೂ ಮಕ್ಕಳು ಬರಲು ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಬೈಂದೂರು ತಾಲೂಕಿನ ಮರವಂತೆ ಗ್ರಾಮ ವ್ಯಾಪ್ತಿಯ ಕುರು ದ್ವೀಪದ ಇಬ್ಬರು ಬಾಲಕಿಯರಾದ ಶಿಲ್ಪಾ ಮತ್ತು ಸಂಜನಾ ಅವರನ್ನು ಇಂದು ಸಹ ನೆರೆಯ ಕಾರಣ ವಿಶೇಷವಾಗಿ ನಿಯೋಜಿಸಲಾದ ದೋಣಿಯನ್ನು ಬಳಸಲಾಗಿತ್ತು. ಸ್ವತಹ ಡಿಡಿಪಿಐ, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ದೋಣಿಯಲ್ಲಿ ತೆರಳಿ ಮಕ್ಕಳನ್ನು ನಾವುಂದ ಕೇಂದ್ರಕ್ಕೆ ತಮ್ಮದೇ ವಾಹನದಲ್ಲಿ ಕರೆತಂದರು.
ಡಿಡಿಪಿಐ ನಾಗೂರ ಅವರು ಬೈಂದೂರು ಕ್ಷೇತ್ರದ ಹಲವು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಉಡುಪಿ ತಾಲೂಕಿನ 21, ಕಾರ್ಕಳದ 16, ಬೈಂದೂರಿನ 13, ಬ್ರಹ್ಮಾವರದ 14 ಕೇಂದ್ರಗಳಲ್ಲಿ ಪರೀಕ್ಷೆಗಳು ಸಾಂಗವಾಗಿ ನಡೆದವು. ಕಾರ್ಕಳ ಮತ್ತು ಕುಂದಾಪುರ ವಲಯಗಳಲ್ಲಿ ಶೇ.100ರಷ್ಟು ಮಕ್ಕಳು ಪರೀಕ್ಷೆ ಬರೆದರು.
5 ಮಂದಿ ಕೋವಿಡ್ ಸೋಂಕಿತರು: ಉಡುಪಿ ಕಾರ್ಕಳ ತಾಲೂಕಿನ ಇಬ್ಬರು, ಬ್ರಹ್ಮಾವರ ತಾಲೂಕಿನ ಇಬ್ಬರು ಹಾಗೂ ಕುಂದಾಪುರ ತಾಲೂಕಿನ ಒಬ್ಬ ಸೇರಿ ಒಟ್ಟು ಐವರು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಅವರು ಆರೋಗ್ಯ ಇಲಾಖೆಯ ಸಹಕಾರದಿಂದ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಪರೀಕ್ಷೆಯನ್ನು ಬರೆದರು.







