ಬಿಎಸ್‍ವೈ ಅವರಿಗೆ ಗೌರವಯುತ ನಿರ್ಗಮನ ಅಗತ್ಯ: ಸಚಿವ ಉಮೇಶ್ ಕತ್ತಿ

ಬೆಂಗಳೂರು, ಜು. 22: `ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪಕ್ಷಕ್ಕಾಗಿ ದುಡಿದಿದ್ದು, ಅವರಿಗೆ ಪಕ್ಷ ಸೂಕ್ತ ಗೌರವವನ್ನು ನೀಡಬೇಕು, ಅದನ್ನು ನಿಶ್ಚಿತವಾಗಿಯೂ ನೀಡಲಿದೆ. ಪಕ್ಷದ ತೀರ್ಮಾನವನ್ನು ಅವರು ಗೌರವಿಸಲಿದ್ದು, ಅವರಿಗೆ ಗೌರವಯುತ ನಿರ್ಗಮನವಾಗಬೇಕು' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಪಕ್ಷದ ಹೈಕಮಾಂಡ್ ಏನು ಹೇಳುತ್ತದೆ ಅದನ್ನು ಪಾಲಿಸುತ್ತೇನೆ ಎಂದು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ್ದಾರೆ. ಅದೇ ರೀತಿಯಲ್ಲಿ ನಾವು ಕೂಡ ಅದನ್ನು ಪಾಲನೆ ಮಾಡುತ್ತೇವೆ' ಎಂದು ಹೇಳಿದರು.
`ಯಡಿಯೂರಪ್ಪ ಬಳಿಕ ಉತ್ತರ ಕರ್ನಾಟಕ ಭಾಗದವರೇ ಮುಖ್ಯಮಂತ್ರಿ ಆಗಬೇಕು ಎನ್ನುವ ಬೇಡಿಕೆ ಇದೆ. ಆ ಭಾಗದ ಯಾವುದೇ ಸಮುದಾಯದವರು ಸಿಎಂ ಆದರೂ ಸಹಕಾರ ನೀಡುತ್ತೇವೆ. ಆ ಭಾಗದಲ್ಲಿ ಲಿಂಗಾಯತ ಸಮುದಾಯ ಶಾಸಕರು ಹೆಚ್ಚಿದ್ದಾರೆ. ಯಾರನ್ನೇ ಮುಖ್ಯಮಂತ್ರಿ ಮಾಡಿದರೂ ನಮ್ಮ ಸ್ವಾಗತವಿದೆ' ಎಂದು ಉಮೇಶ್ ಕತ್ತಿ ಇದೇ ವೇಳೆ ತಿಳಿಸಿದರು.
`ನಾನೂ 8 ಬಾರಿ ಶಾಸಕನಾಗಿದ್ದೇನೆ. ನಾನೂ ಮುಖ್ಯಮಂತ್ರಿ ಆಗಿ ರಾಜ್ಯ ಆಳಬೇಕು ಎಂದು ಆಸೆ ಇದೆ. ನಾನೂ ಯಡಿಯೂರಪ್ಪ ಅವರ ಸಮನಾಗಿದ್ದೇನೆ. ನನಗೆ ಇನ್ನೂ 15 ವರ್ಷ ಅವಕಾಶ ಇದೆ. ಯಾವತ್ತಾದರೂ ಒಂದು ಒಂದು ದಿನ ಸಿಎಂ ಆಗ್ತಿನಿ ಅನ್ನುವ ಭರವಸೆ ಇದೆ. ನಾನು ಈಗ ಹೈಕಮಾಂಡ್ ಭೇಟಿಗೆ ಹೋಗಲ್ಲ. ಬಿಜೆಪಿಯಲ್ಲಿ 75 ವರ್ಷದ ಮಿತಿ ಇದೆ. ಬಿಎಸ್‍ವೈ ಅವರಿಗೆ 80 ವರ್ಷ ಹತ್ತಿರ ಆಗಿದೆ' ಎಂದು ಉಮೇಶ್ ಕತ್ತಿ ನುಡಿದರು.







