ಶತಮಾನದ ಶಾಲೆ ಧ್ವಂಸ ಮಾಡದಂತೆ ಪಟ್ಟು: ಬೆಂಗಳೂರಿನಲ್ಲಿ ಪ್ರತಿಭಟನೆ

ಬೆಂಗಳೂರು, ಜು.22: ಬರೋಬ್ಬರಿ ಹದಿನಾಲ್ಕು ದಶಕಗಳ ಹಿಂದೆ ಆರಂಭವಾದ ಮೈಸೂರು ಸಂಸ್ಥಾನದ ಮೊಟ್ಟ ಮೊದಲ ಹೆಣ್ಣು ಮಕ್ಕಳ ಶಾಲೆಯನ್ನು ಯಾವುದೇ ಕಾರಣಕ್ಕೆ ಧ್ವಂಸ ಮಾಡದಂತೆ ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಚಿಂತಕರು ಒಕ್ಕೂಲಿನಿಂದ ಆಗ್ರಹಿಸಿದರು.
ಗುರುವಾರ ನಗರದ ಮೌರ್ಯ ಸರ್ಕಲ್ ಬಳಿ ಮೈಸೂರಿನ ಮಹಾರಾಣಿ ಮಾದರಿ ಸರಕಾರಿ ಶಾಲೆ ಉಳಿಸುವಂತೆ ಬೃಹತ್ ಪ್ರತಿಭಟನೆ ನಡೆಸಿದ ಹೋರಾಟಗಾರರು, ಈ ಐತಿಹಾಸಿಕ ಶಾಲೆಯನ್ನು ಕೆಡವಿ ಸ್ವಾಮಿ ವಿವೇಕಾನಂದ ಸ್ಮಾರಕಕ್ಕೆ ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಒತ್ತಾಯ ಮಾಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಶಾಲೆಯನ್ನು ಧ್ವಂಸ ಮಾಡಿ ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಾಣ ಮಾಡುವ ಅಗತ್ಯವಿಲ್ಲ. ಅಲ್ಲದೆ, ಶಾಲಾ ಆವರಣದಲ್ಲಿ ನಿವೇಶನ ಖಾಲಿ ಇದ್ದು, ಆ ಜಾಗದಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಲಿ. ಅದು ಬಿಟ್ಟು ಐತಿಹಾಸಿಕ ಹಿನ್ನೆಲೆ ಇರುವ ಶಾಲೆ ಕೆಡವಲು ಬಿಡುವುದಿಲ್ಲ ಎಂದರು.
ಈಗಾಗಲೇ ಏಕಸದಸ್ಯ ಪೀಠ ಒಂದು ತೀರ್ಪು ಕೊಟ್ಟಿದ್ದು, ಮರುಪರಿಶೀಲನೆಗೆ ನ್ಯಾಯಾಲಯದ ಹಂತದಲ್ಲಿದೆ. ಆದರೆ, ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಸರಕಾರವೇ ಸರಕಾರಿ ಶಾಲೆಯನ್ನು ಉಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಸುಮಾರು 1881ರಲ್ಲಿ ಸ್ಥಾಪನೆಯಾದ ಮಾದರಿ ಸರಕಾರಿ ಶಾಲೆಯು, 140 ವರ್ಷಗಳ ಇತಿಹಾಸವಿದೆ. ಸುಮಾರು 140 ವರ್ಷಗಳಿಂದಲೂ ಪಾಠ-ಪ್ರವಚನ ನಡೆಯುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಲೇಖಕಿ ಡಾ.ವಸುಂಧರಾ ಭೂಪತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
.jpg)







