ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಬೆಂಗಳೂರು, ಜು.22: ರಾಜ್ಯ ಸರಕಾರದ ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿ ನೀಡುವಂತೆ ವೈದ್ಯಕೀಯ ಪದವೀಧರರು ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ತಿರಸ್ಕರಿಸಿರುವ ಹೈಕೋರ್ಟ್, ಕೊರೋನ 3ನೆ ಅಲೆ ಎದುರಾಗುತ್ತಿರುವ ಸಂದರ್ಭದಲ್ಲಿ ವೈದ್ಯರು ತಮ್ಮ ಕರ್ತವ್ಯವನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ರಾಜ್ಯ ಸರಕಾರದ ಕಡ್ಡಾಯ ಗ್ರಾಮೀಣ ಸೇವೆ ಪ್ರಶ್ನಿಸಿ ವೈದ್ಯಕೀಯ ಪದವೀಧರರಾದ ಡಾ. ಪ್ರಾರ್ಥನಾ ಹಾಗೂ ಇತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವೈದ್ಯಕೀಯ ಪದವೀಧರರು ಸರಕಾರಿ ಕೋಟಾದಲ್ಲಿ ವೈದ್ಯಕೀಯ ಕೋರ್ಸ್‍ಗೆ ಸೇರುವ ಸಂದರ್ಭದಲ್ಲಿ ಸರಕಾರದೊಂದಿಗೆ ಕರಾರು ಮಾಡಿಕೊಂಡಿದ್ದಾರೆ. ಮುಂದೆ ಇವರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಾರೆಂಬ ಆಶಯದಲ್ಲೇ ಸರಕಾರ ಶುಲ್ಕದಲ್ಲಿ ರಿಯಾಯಿತಿ ನೀಡಿದೆ. ವೈದ್ಯಕೀಯ ಪದವೀಧರರು ಸರಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಗ್ರಾಮೀಣ ಸೇವೆ ಸಲ್ಲಿಸಬೇಕು.
ಕೊರೋನ ಮೊದಲೆ, ಎರಡನೆ ಅಲೆಯಿಂದಾಗಿ ಈಗಾಗಲೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. 3 ಅಲೆ ಎದುರಾಗುತ್ತಿರುವ ಸಂದರ್ಭದಲ್ಲಿ ವೈದ್ಯರು ತಮ್ಮ ಕರ್ತವ್ಯದ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳಬೇಕಿದೆ ಎಂದಿರುವ ಪೀಠ, ಅರ್ಜಿದಾರ ವೈದ್ಯರು ಸರಕಾರದೊಂದಿಗೆ ಈಗಾಗಲೇ ಸ್ವಯಂಪ್ರೇರಿತವಾಗಿ ಮಾಡಿಕೊಂಡಿರುವ ಒಪ್ಪಂದದಂತೆ ಸೇವೆ ಸಲ್ಲಿಸಬೇಕು ಎಂದು ಸೂಚಿಸಿದೆ. ಅಲ್ಲದೇ, ಒಪ್ಪಂದದಂತೆ ಸೇವೆ ಸಲ್ಲಿಸಲು ವೈದ್ಯರಿಗೆ ಸರಕಾರ ನೀಡಿರುವ ಸೂಚನೆಯೂ ಸರಿಯಾಗಿದೆ ಎಂದು ತಿಳಿಸಿದೆ.
ಪ್ರಕರಣವೇನು: 2021ರಲ್ಲಿ ಎಂಬಿಬಿಎಸ್ ಪದವಿ ಪೂರೈಸಿರುವ ವೈದ್ಯಕೀಯ ಪದವೀಧರರು ಕಡ್ಡಾಯ ಗ್ರಾಮೀಣ ಸೇವೆಗೆ ನೋಂದಾಯಿಸಿಕೊಳ್ಳುವಂತೆ ರಾಜ್ಯ ಸರಕಾರ ಜೂ.8ರಂದು ಆದೇಶ ಹೊರಡಿಸಿತ್ತು. ಜೂ.17ರಂದು ಮತ್ತೊಂದು ಅಧಿಸೂಚನೆ ಹೊರಡಿಸಿದ್ದ ಸರಕಾರ ಜೂ.30ರಿಂದ ಕಡ್ಡಾಯ ಗ್ರಾಮೀಣ ಸೇವೆ ಪ್ರಾರಂಭವಾಗಲಿದ್ದು ನೂತನ ವೈದ್ಯರು ನೋಂದಾಯಿಸಿಕೊಳ್ಳುವಂತೆ ಸೂಚಿಸಿತ್ತು.
ಸರಕಾರದ ಈ ಕ್ರಮ ಉನ್ನತ ವ್ಯಾಸಂಗಕ್ಕೆ ಹೋಗುವವರಿಗೆ ಅಡ್ಡಿಯಾಗಿದೆ. ಸ್ನಾತಕೋತ್ತರ ವೈದ್ಯಕೀಯ ಪದವಿ ಓದುವ ಆಕಾಂಕ್ಷೆ ಇಟ್ಟುಕೊಂಡಿರುವ ನಮಗೆ ಈ ಕಡ್ಡಾಯ ಸೇವೆಯಿಂದ ವಿನಾಯಿತಿ ಕೊಡಿಸಬೇಕು ಎಂದು ಅರ್ಜಿದಾರ ವೈದ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಲ್ಲದೇ, ಖಾಸಗಿ ಮ್ಯಾನೇಜ್ಮೆಂಟ್ ಕೋಟಾದಡಿ ಸೀಟು ಪಡೆದು ವೈದ್ಯಕೀಯ ಪದವಿ ಪೂರೈಸಿದವರಿಗೆ ಈ ನಿಯಮ ಅನ್ವಯಿಸಿಲ್ಲ. ಹೀಗಾಗಿ ಸರಕಾರದ ಆದೇಶ ಒಂದೇ ಬ್ಯಾಚ್ ನಲ್ಲಿ ಓದಿದ ವಿದ್ಯಾರ್ಥಿಗಳ ನಡುವೆ ತಾರತಮ್ಯ ಉಂಟಮಾಡಿದೆ. ಅದೇ ರೀತಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಮ್‍ಸಿ) ಕಾಯ್ದೆ-2019 ಜಾರಿಗೆ ಬಂದ ನಂತರ ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಯನ್ನು ನಿಯಂತ್ರಿಸುವ ಅಧಿಕಾರ ರಾಜ್ಯ ಸರಕಾರಗಳಿಗೆ ಇಲ್ಲವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.







