ಟೋಕಿಯೊ ಒಲಿಂಪಿಕ್ಸ್:ಮಹಿಳಾ ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ದೀಪಿಕಾ ಕುಮಾರಿಗೆ 9ನೇ ಸ್ಥಾನ
ಮೊದಲ ಸುತ್ತಿನಲ್ಲಿ ಭೂತಾನ್‌ನ ಆರ್ಚರಿ ಎದುರಾಳಿ

ಟೋಕಿಯೊ: ಮಹಿಳೆಯರ ವೈಯಕ್ತಿಕ ಶ್ರೇಯಾಂಕದ ಸುತ್ತಿನಲ್ಲಿ ಭಾರತದ ಸ್ಟಾರ್ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಒಂಬತ್ತನೇ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಮುಖ್ಯ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಸುಲಭ ಎದುರಾಳಿಯನ್ನು ಎದುರಿಸುವ ಅವಕಾಶ ಪಡೆದರು. ದೀಪಿಕಾ ಸ್ಪರ್ಧೆಯೊಂದಿಗೆ ಒಲಿಂಪಿಕ್ಸ್ ನಲ್ಲಿ ಭಾರತದ ಅಭಿಯಾನವು ಇಲ್ಲಿನ ಯುಮೆನೋಶಿಮಾ ಪಾರ್ಕ್‌ನಲ್ಲಿ ಶುಕ್ರವಾರ ಆರಂಭವಾಯಿತು.
ವಿಶ್ವದ ನಂ .1 ಬಿಲ್ಲುಗಾರ್ತಿ ದೀಪಿಕಾ 663 ಅಂಕಗಳನ್ನು ಗಳಿಸಿ 9ನೇ ಸ್ಥಾನ ಪಡೆದರು. 20 ವರ್ಷದ ಕೊರಿಯಾದ ಆರ್ಚರಿ ಆನ್ ಸ್ಯಾನ್ 680 ಅಂಕಗಳೊಂದಿಗೆ ಒಲಿಂಪಿಕ್ಸ್ ದಾಖಲೆಯೊಂದಿಗೆ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಶ್ರೇಯಾಂಕ ಸುತ್ತಿನಲ್ಲಿ 56 ನೇ ಸ್ಥಾನ ಪಡೆದಿರುವ ಭೂತಾನ್‌ನ ವಿಶ್ವದ ನಂ .193 ಆಟಗಾರ್ತಿ ಕರ್ಮ ವಿರುದ್ಧ ದೀಪಿಕಾ ಮೊದಲ ಸುತ್ತಿನ ಪಂದ್ಯವನ್ನು ಆಡಲಿದ್ದಾರೆ.
ದೀಪಿಕಾ ಕ್ವಾರ್ಟರ್ ಫೈನಲ್ ಹಂತದಲ್ಲಿ ಸಾನ್ ಅವರನ್ನು ಎದುರಿಸುವ ಸಾಧ್ಯತೆಯಿದೆ. 2019 ರಲ್ಲಿ ಅದೇ ಸ್ಥಳದಲ್ಲಿ ನಡೆದ ಒಲಿಂಪಿಕ್ಸ್ ಟೆಸ್ಟ್ ಸ್ಪರ್ಧೆಯಲ್ಲಿ ದೀಪಿಕಾ ಅವರು ಸಾನ್ ಗೆ ನೇರ ಸೆಟ್‌ಗಳಿಂದ ಸೋತಿದ್ದರು.
ಇಂದು ಸಂಜೆ ಒಲಿಂಪಿಕ್ಸ್ ಕ್ರೀಡಾಕೂಟ ಅಧಿಕೃತವಾಗಿ ಆರಂಭವಾಗಲಿದೆ.