ಪೆಗಾಸಸ್ ಹಗರಣ: ನ್ಯಾಯಾಲಯದ ವಿಚಾರಣೆ ನಡೆಸಬೇಕೆಂಬ ರಾಹುಲ್ ಗಾಂಧಿ ಬೇಡಿಕೆ ತಿರಸ್ಕರಿಸಿದ ಸರಕಾರ

ಹೊಸದಿಲ್ಲಿ: ಪೆಗಾಸಸ್ ಸ್ಪೈವೇರ್ ವರದಿಗಳಿಗೆ ಸಂಬಂಧಿಸಿರುವ ಸ್ನೂಪಿಂಗ್ ಆರೋಪಗಳ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೇಡಿಕೆಯನ್ನು ಕೇಂದ್ರ ಸರಕಾರ ಇಂದು ತಿರಸ್ಕರಿಸಿದೆ. ತನ್ನದೇ ಫೋನ್ ಟ್ಯಾಪ್ ಮಾಡಿದ್ದಾರೆ ಎಂದು ರಾಹುಲ್ ಇದೇ ವೇಳೆ ಆರೋಪಿಸಿದ್ದಾರೆ.
"ಸ್ಪೈವೇರ್ ಪ್ರಕರಣದಲ್ಲಿ ನಾವು ಎಲ್ಲವನ್ನೂ ಸ್ಪಷ್ಟಪಡಿಸಿದ್ದೇವೆ. ಯಾವುದೇ ತನಿಖೆಗೆ ಯಾವುದೇ ಸಮಸ್ಯೆ ಇಲ್ಲ. ರಾಜಕೀಯವಾಗಿ ವೈಫಲ್ಯ ಕಂಡವರು ಆರೋಪಗಳನ್ನು ಮಾಡುತ್ತಿದ್ದಾರೆ ಹಾಗೂ ಅವರಿಗೆ ಬೇರೆ ವಿಚಾರಗಳಿಲ್ಲ" ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಕುಮಾರ್ NDTVಗೆ ತಿಳಿಸಿದ್ದಾರೆ.
ಭಾರತ ಹಾಗೂ ಅದರ ಸಂಸ್ಥೆಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಪೆಗಾಸಸ್ ಸ್ಪೈವೇರ್ ಅನ್ನು ಬಳಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಇದರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.





