ಜು.25ರಂದು ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

ಮಂಗಳೂರು, ಜು.23: ತ್ರಿಮತಸ್ಥ ಬ್ರಾಹ್ಮಣ ಸಮುದಾಯದ ಅರ್ಚಕರು, ಪುರೋಹಿತರು ಹಾಗೂ ಸಹಾಯಕರನ್ನು ಒಳಗೊಂಡ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ದ.ಕ. ಮತ್ತು ಉಡುಪಿ ಜಿಲ್ಲಾ ಘಟಕವು ಜು.25ರಂದು ಉದ್ಘಾಟನೆಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಂಘದ ಅಧ್ಯಕ್ಷ ಪ್ರಕಾಶ ಹೊಳ್ಳ, ಪಣಂಬೂರಿನ ನಂದನೇಶ್ವರ ದೇವಸ್ಥಾನದಲ್ಲಿ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು.
2 ವರ್ಷಗಳ ಕೊರೋನ ಸಂಕಷ್ಟ ಅಸಂಘಟಿತ ಪುರೋಹಿತ ವರ್ಗವನ್ನೂ ಅಸಹಾಯಕರನ್ನಾಗಿಸಿದೆ. ಸರಕಾರವೂ ಸಾಂತ್ವನ ಅಥವಾ ಆರ್ಥಿಕವಾಗಿ ಸಹಾಯ ನೀಡಲು ಸಾಧ್ಯವಾಗದ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ಸರಕಾರದ ಸವಲತ್ತುಗಳನ್ನು ಪಡೆಯುವ ಉದ್ದೇಶದಿಂದ ಈ ಸಂಘವನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಮಾತ್ರವಲ್ಲದೆ, ಅಸಂಘಟಿತ ಪುರೋಹಿತರು ಆಕಸ್ಮಿಕ ಅಪಘಾತ, ತುರ್ತು ಸಂದರ್ಭ ಅಥವಾ ವಯೋವೃದ್ಧರಾಗುವ ಸಂದರ್ಭ ಸರಕಾರದಿಂದ ಪಿಂಚಣಿಯ ರೂಪದಲ್ಲಾದರೂ ನೆರವು ಪಡೆಯುವ ಮೂಲಕ ಅಭದ್ರತೆಯನ್ನು ಹೋಗಲಾಡಿಸುವುದು ಸಂಘ ಸ್ಥಾಪನೆ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ಎಂ.ಬಿ. ಅನಂತಮೂರ್ತಿ ಮಾರ್ಗದರ್ಶನದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಘಟಕವನ್ನು ಸ್ಥಾಪಿಸಲಾಗಿದ್ದು, ಈಗಾಗಲೇ ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯಡಿ ನೋಂದಾಯಿಸಲ್ಪಟ್ಟಿದೆ ಎಂದು ಅವರು ಹೇಳಿದರು.
ಕೆಲ ದಿನಗಳ ಹಿಂದಷ್ಟೇ ರೂಪುಗೊಂಡ ಈ ನೂತನ ಸಂಘದಲ್ಲಿ ಈಗಾಗಲೇ 500ಕ್ಕೂ ಅಧಿಕ ಸದಸ್ಯರು ನೋಂದಾಯಿಸಿಕೊಂಡಿದ್ದು, ಉಭಯ ಜಿಲ್ಲೆಗಳಲ್ಲಿ 3,000ಕ್ಕೂ ಅಧಿಕ ಅಸಂಘಟಿತ ಪುರೋಹಿತರಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸುಭಾಷ್ ಪರಾಂಜಪೆ, ಗೌರವಾಧ್ಯಕ್ಷ ರಘುರಾಮ ರಾವ್ ಕೆ., ಸುಬ್ರಹ್ಮಣ್ಯ ಮಯ್ಯ, ಸೂರ್ಯ ನಾರಾಯಣ ಐತಾಳ ಉಪಸ್ಥಿತರಿದ್ದರು.







