ಹಾಸನದಲ್ಲಿ ಮುಂದುವರಿದ ಮಳೆಯ ಆರ್ಭಟ: ಯಗಜಿ ಜಲಾಶಯ ಭರ್ತಿ

ಹಾಸನ,ಜು.23: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಅರಸೀಕೆರೆ, ಆಲೂರು, ಬೇಲೂರು, ಕೊಣನೂರಿನಲ್ಲಿ ಉತ್ತಮ ಮಳೆಯಾಗಿದೆ.
ಸತತ ನಾಲ್ಕು ದಿನಗಳಿಂದ ಮುಂಗಾರು ಬಿರುಸುಗೊಂಡಿರುವುದರಿಂದ ಅನ್ನದಾತರ ಮೊಗದಲ್ಲಿ ಸಂತಸ ಮೂಡಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಇನ್ನೊಂದು ಕಡೆ ಕಾಫಿ ಗಿಡಗಳಲ್ಲಿ ಈಗಾಗಲೇ ಕಾಯಿ ಕಟ್ಟಿದ್ದು ಹೆಚ್ಚು ಮಳೆಯಾದರೆ ಕೊಳೆ ರೋಗ ಕಾಣಿಸಿಕೊಳ್ಳುವ ಭೀತಿಯೂ ಎದುರಾಗಿದೆ.
ಹಾನಬಾಳ್ ಹೋಬಳಿಯ ಪಶ್ಚಿಮಘಟ್ಟದಂಚಿನ ಗ್ರಾಮವಾದ ಅಚ್ಚನಹಳ್ಳಿ, ಹೆತ್ತೂರು ಹೋಬಳಿ ಬೊಮ್ಮನಕೆರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂರು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು ಈ ಬಾರಿ ದಾಖಲೆ ಪ್ರಮಾಣದಲ್ಲಿ ಮಳೆ ಬಿದ್ದಿದೆ.
ಗೊರೂರು ಜಲಾಶಯ ಭರ್ತಿಗೆ 12 ಅಡಿ ಬಾಕಿ
ಜಲಾನಯನ ಪ್ರದೇಶಗಳಾದ ಸಕಲೇಶಪುರ ಮತ್ತು ಮೂಡಿಗೆರೆ ಭಾಗದಲ್ಲಿ ಮಳೆ ಆಗುತ್ತಿರುವುದರಿಂದ ಹೇಮಾವತಿ ಜಲಾಶಯದ ಒಳ ಹರಿವು ಹೆಚ್ಚಾಗಿದೆ. 2,922 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಬುಧವಾರ 2910.35 ಅಡಿ ನೀರು ಸಂಗಹ್ರವಾಗಿದ್ದು, ಒಳ ಹರಿವು 20 ಸಾವಿರ ಕ್ಯುಸೆಕ್ ದಾಟಿದೆ . ಹೊರ ಹರಿವು 410 ಕ್ಯುಸೆಕ್ ಇದೆ. ಜಲಾಶಯದಲ್ಲಿ 72 ಟಿಎಂಸಿ ನೀರು ಸಂಗ್ರಹವಾಗಿದೆ.
ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿರುವುದರಿಂದ ಯಾವುದೇ ಕ್ಷಣದಲ್ಲಿ ನೀರು ನದಿಗೆ ಹರಿ ಬಿಡುವ ಸಾಧ್ಯತೆಯಿದೆ. ಆದ ಕಾರಣ ಅಚ್ಚುಕಟ್ಟು ಪ್ರದೇಶದ ಜನರು ಎಚ್ಚರಿಕೆಯಿಂದ ಇರಲು, ನದಿಗೆ ಇಳಿಯದಂತೆ ಜಲಾಶಯದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ನಾಲೆಗೆ ನೀರುಬಿಡಲು ಒತ್ತಾಯ
ಯಗಚಿ ಜಲಾಶಯ ಕಳೆದ ವಾರದಿಂದಲೇ ಭರ್ತಿಯಾಗಿದ್ದು, ಎಲ್ಲಾ ಕ್ರಸ್ಟ್ ಗೇಟ್ ಗಳ ಮೂಲಕ ನೀರನ್ನು ನದಿಗೆ ಹರಿಬಿಡಲಾಗುತ್ತದೆ ಆದರೆ ನದಿಗೆ ಹರಿ ಬಿಡುವ ಬದಲು ನಾಲೆಗಳಿಗೆ ನೀರು ಹರಿಸುವಂತೆ ಜೆಡಿಎಸ್ ಮುಖಂಡ ಚನ್ನಂಗಿಹಳ್ಳಿ ಶ್ರೀಕಾಂತ್ ಒತ್ತಾಯಿಸಿದ್ದಾರೆ.
ಹಾಸನ ತಾಲೂಕಿನಲ್ಲಿ ಕಟ್ಟಾಯ ಹೋಬಳಿ ಶಾಂತಿಗ್ರಾಮ ಹೋಬಳಿ ಕಸಬಾ ಹೋಬಳಿ ಹಳೇಬೀಡು ಹೋಬಳಿ ಹಾಗೂ ಮಾದಿಹಳ್ಳಿ ಸುತ್ತಮುತ್ತ ಕೆರೆಕಟ್ಟೆಗಳು ತುಂಬದೇ ಬರಿದಾಗಿವೆ ಆದ್ದರಿಂದ ಅಣೆಕಟ್ಟೆ ನೀರನ್ನು ನದಿಗೆ ಬಿಡದೆ ಬರಗಾಲದಿಂದ ತತ್ತರಿಸಿ ಹೋಗಿರುವ ಹೋಬಳಿಯ ಗ್ರಾಮಗಳಿಗೆ ನೀರು ಹರಿಸಿದರೆ ಕೆರೆ ಕಟ್ಟೆ ತುಂಬಲು ಅಂತರ್ಜಾಲ ವೃದ್ಧಿಗೆ ಅನುಕೂಲಕರವಾಗುತ್ತದೆ. ಈಗಾಗಲೇ ದನಕರುಗಳಿಗೆ ರೈತರ ಜಮೀನುಗಳಿಗೆ ನೀರಾವರಿ ಮೂಲ ಅವಶ್ಯಕತೆಯಾಗಿದೆ. ಯಗಚಿ ಡ್ಯಾಮ್ ತುಂಬಿದ್ದರೂ ನಾಲೆಗಳಿಗೆ ನೀರು ಹರಿಸದೇ ತೊಂದರೆ ಯಾಗಿರುವುದರಿಂದ ಯಗಚಿ ನದಿಯ ನಾಲೆಗಳಿಗೆ ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಸದ್ಯ ಯಗಚಿ ಜಲಾಶಯದಿಂದ ಒಂದು ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ವಾಟೇಹೊಳೆ ಜಲಾಶಯವು ಭಾಗಶಃ ಭರ್ತಿಯಾಗಿದ್ದು 6.10 ಕ್ಯೂಸೆಕ್ಸ್ ನೀರು ನದಿಗೆ ಹರಿಬಿಡಲಾಗುತ್ತಿದೆ.
ಆಲೂರು ತಾಲೂಕಿನಲ್ಲಿರುವ ವಾಟೆಹೊಳೆ ಜಲಾಶಯ, ಬೇಲೂರು ತಾಲ್ಲೂಕಿನ ಯಗಚಿ ಜಲಾಶಯ ಎರಡೂ ಭರ್ತಿಯಾಗಿದ್ದು ಈ ಭಾಗದ ಜನರೂ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.








