ಮುಖ್ಯಮಂತ್ರಿ ಬದಲಾವಣೆ ವಿಚಾರ: ಪರೀಕ್ಷೆ ಫಲಿತಾಂಶ ಬಂದಾಗಿದೆ; ಸಚಿವ ಸಿ.ಪಿ.ಯೋಗೇಶ್ವರ್

ಬೆಂಗಳೂರು, ಜು. 23: `ಅಧಿಕಾರ ಯಾರಿಗೂ ಶಾಶ್ವತವಲ್ಲ, ನಾವು ಶಾಶ್ವತವಾಗಿ ಮಂತ್ರಿಯಾಗಿ ಇರುವುದಿಲ್ಲ. ಪರೀಕ್ಷೆ ಫಲಿತಾಂಶ ಬಂದಾಗಿದೆ' ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್, ಮುಖ್ಯಮಂತ್ರಿ ಬದಲಾವಣೆ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ಇಲ್ಲಿನ ಚಿಕ್ಕಬಳ್ಳಾಪುರದ ನಂದಿ ಗಿರಿಧಾಮಕ್ಕೆ ಭೇಟಿ ನೀಡಿ ಉದ್ದೇಶಿತ ರೋಪ್ ವೇ ನಿರ್ಮಾಣ ಕಾಮಗಾರಿಯ ಸ್ಥಳವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜೀನಾಮೆಗೆ ಸಿದ್ಧ ಎಂದು ಮಾಧ್ಯಮಗಳ ಮುಂದೆ ಹೇಳುವ ಮೂಲಕ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ' ಎಂದು ಹೇಳಿದರು
`ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದಲಾವಣೆಯ ಬಗ್ಗೆ ತಾವು ವರಿಷ್ಠರೊಂದಿಗೆ ಚರ್ಚಿಸಿಲ್ಲ. ಸ್ಥಳೀಯವಾಗಿ ತಮ್ಮ ಸಮಸ್ಯೆ ಹಾಗೂ ನೋವುಗಳನ್ನು ವರಿಷ್ಠರ ಬಳಿ ಹೇಳಿಕೊಂಡಿದ್ದೆ ಅಷ್ಟೇ. ಯಡಿಯೂರಪ್ಪನವರ ಹೇಳಿಕೆಯನ್ನು ಗಮನಿಸಿದ್ದೇನೆ. ಅವರು ಹಿರಿಯರಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಇಲ್ಲ' ಎಂದು ಸಿ.ಪಿ.ಯೋಗೇಶ್ವರ್ ಹೆಚ್ಚಿನ ಪ್ರತಿಕ್ರಿಯೆ ನೀಡಲು ಇದೇ ಸಂದರ್ಭದಲ್ಲಿ ನಿರಾಕರಿಸಿದರು.
`ಕುಮಾರಸ್ವಾಮಿ ಅವರದ್ದು ದ್ವಂದ್ವ ನಿಲುವು, ಅವರಿಗೆ ಕೆಲಸವಾಗಬೇಕಾದಾಗ ಯಡಿಯೂರಪ್ಪರವರನ್ನು ಭೇಟಿ ಮಾಡಿ ಹೊಗಳಿ ಕೆಲಸ ಮಾಡಿಸಿಕೊಳ್ಳುತ್ತಾರೆ. ನಂತರ ಅವರನ್ನೇ ದೂಷಿಸುತ್ತಾರೆ. ಅದಕ್ಕೆ ನಾನು ಎಚ್‍ಡಿಕೆ ಅವರನ್ನು ದೂರ ಇಡಿ ಹತ್ತಿರ ಇಟ್ಟುಕೊಳ್ಳಬೇಡಿ ಎಂದು ಹಿಂದೆಯೇ ಮುಖ್ಯಮಂತ್ರಿಗೆ ಹೇಳಿದ್ದೆ. ಪಕ್ಷವೂ ಅದನ್ನೇ ಹೇಳಿದೆ ಎಂದು ಯೋಗೇಶ್ವರ್ ಇದೇ ವೇಳೆ ತಿರುಗೇಟು ನೀಡಿದರು.
ರೋಪ್ ವೇ ನಿರ್ಮಾಣ: `ನಂದಿ ಗಿರಿಧಾನಕ್ಕೆ ರೋಪ್ ವೇ ಅಳವಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಚರ್ಚೆಗಳೂ ಆಗಿದೆ. ಇಂದು ಟೆಂಡರ್ ಕರೆಯುವುದನ್ನು ಅಂತಿಮಗೊಳಿಸಲಾಗುವುದು. ಈ ರೋಪ್ ವೇ ನಿರ್ಮಾಣವನ್ನು ಖಾಸಗಿ ಸಹಭಾಗಿತ್ವದಲ್ಲೇ ಕೈಗೆತ್ತಿಕೊಳ್ಳಲಾಗಿದೆ.
ಸರಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ. ರೋಪ್ ವೇ ನಿರ್ಮಾಣ, ನಿರ್ವಹಣೆ ಖಾಸಗಿಯವರೇ ನೋಡಿಕೊಳ್ಳುತ್ತಾರೆ. ಸರಕಾರಿ ವ್ಯವಸ್ಥೆಗೆ ಬಂದರೆ ರೋಪ್ ವೇ ಅಷ್ಟೇನು ಯಶಸ್ವಿಯಾಗುವುದಿಲ್ಲ ಎಂಬ ಕಾರಣಕ್ಕೆ ಖಾಸಗಿಯವರ ಜತೆ ಕೈ ಜೋಡಿಸಲಾಗಿದೆ' ಎಂದು ಯೋಗೇಶ್ವರ್ ತಿಳಿಸಿದರು.
`ನನಗೆ ಸಂಸದ ಡಿ.ಕೆ.ಸುರೇಶ್, ಸಿಡಿ ಯೋಗೇಶ್ವರ್ ಎಂದರೆ ನಾನು ಅವರಿಗೆ ಕೆಡಿ ಸುರೇಶ್ ಎಂದು ಹೇಳಬಹುದು. ಆದರೆ, ನನಗೆ ಕಪ್ಪುಚುಕ್ಕೆ ತರಲು ಸಾಧ್ಯವಿಲ್ಲ. ಇದೀಗ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ' ಎಂದು ಟೀಕಿಸಿದ ಯೋಗೇಶ್ವರ್, ಇಂತಹ ಪ್ರತಿರೋಧ ನನಗೆ ಹೊಸದೇನು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.







