ದೈನಿಕ್ ಭಾಸ್ಕರ್, ಭಾರತ ಸಮಾಚಾರ್ ಮೇಲಿನ ದಾಳಿ ಬೆದರಿಕೆಯ ಕೃತ್ಯ: ಮಾಧ್ಯಮ ಸಂಘಟನೆಗಳ ಟೀಕೆ

ಹೊಸದಿಲ್ಲಿ,ಜು.23: ದೈನಿಕ್ ಭಾಸ್ಕರ ಸಮೂಹದ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಯು ಮಾಧ್ಯಮಗಳಿಗೆ ಬೆದರಿಕೆಯೊಡ್ಡುವ ಸರಕಾರದ ಪ್ರಯತ್ನವಾಗಿದೆ ಎಂದು ಮಾಧ್ಯಮ ಸಂಘಟನೆಗಳು ಟೀಕಿಸಿವೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಲಕ್ನೋದ ಭಾರತ ಸಮಾಚಾರ್ ಟಿವಿ ವಾಹಿನಿಯ ಕಚೇರಿಯ ಮೇಲೂ ದಾಳಿ ನಡೆಸಿದ್ದರು.
ಕೋವಿಡ್ ಎರಡನೇ ಅಲೆ ಮತ್ತು ಅದರ ವಿನಾಶಕಾರಿ ಪರಿಣಾಮದ ಬಗ್ಗೆ ವ್ಯಾಪಕ ವರದಿಗಳನ್ನು ಮಾಡಿದ್ದ ದೈನಿಕ್ ಭಾಸ್ಕರ ಲಸಿಕೆಯ ಅಂಕಿಅಂಶಗಳು,ಸಾವುಗಳ ಸಂಖ್ಯೆಯ ತಪ್ಪು ವರದಿ,ಗಂಗಾನದಿಯಲ್ಲಿ ತೇಲುತ್ತಿದ್ದ ಶವಗಳು ಮತ್ತು ಆಮ್ಲಜನಕದ ಕೊರತೆಯಿಂದ ಸಾವುಗಳು ಇತ್ಯಾದಿಗಳ ಬಗ್ಗೆ ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸಿತ್ತು. ಭಾರತ ಸಮಾಚಾರ್ ಉತ್ತರ ಪ್ರದೇಶದಲ್ಲಿ ಕೋವಿಡ್ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಯೋಗಿ ಆದಿತ್ಯನಾಥ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸಿತ್ತು.
ಮುಕ್ತ ಮತ್ತು ಸ್ವತಂತ್ರ ಪತ್ರಿಕೋದ್ಯಮವನ್ನು ದಮನಿಸಲು ಸರಕಾರಿ ಸಂಸ್ಥೆಗಳನ್ನು ದಬ್ಬಾಳಿಕೆಯ ಅಸ್ತ್ರಗಳನ್ನಾಗಿ ಬಳಸಲಾಗುತ್ತಿದೆ ಎಂದು ಹೇಳಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ,ಪೆಗಾಸಸ್ ಸ್ಪೈವೇರ್ ಬಳಸಿ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲೆ ವ್ಯಾಪಕ ಬೇಹುಗಾರಿಕೆಯ ಇತ್ತೀಚಿನ ಮಾಧ್ಯಮ ವರದಿಗಳನ್ನು ಪರಿಗಣಿಸಿದರೆ ಇದು ಇನ್ನಷ್ಟು ಹೆಚ್ಚು ಆತಂಕಕಾರಿಯಾಗಿದೆ ಎಂದು ಹೇಳಿದೆ.
ದಾಳಿಗಳ ಸಮಯವನ್ನೂ ಪ್ರಶ್ನಿಸಿರುವ ಗಿಲ್ಡ್,ಸರಕಾರಿ ಅಧಿಕಾರಿಗಳ ಸಾರಾಸಗಟು ಕೆಟ್ಟ ನಿರ್ವಹಣೆ ಮತ್ತು ಅಪಾರ ಸಾವುಗಳನ್ನು ಮುನ್ನೆಲೆಗೆ ತಂದಿದ್ದ, ಸಾಂಕ್ರಾಮಿಕದ ಕುರಿತು ದೈನಿಕ್ ಭಾಸ್ಕರ್ ನ ತೀಕ್ಷ್ಣ ವರದಿಗಾರಿಕೆಯ ಬಳಿಕ ಈ ದಾಳಿಗಳು ನಡೆದಿವೆ ಎಂದು ಹೇಳಿದೆ. ಆದಾಯ ತೆರಿಗೆ ದಾಳಿಗಳು ಸ್ವತಂತ್ರ ಮಾಧ್ಯಮಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಹಿಂಜರಿಯುವಂತೆ ಮಾಡಲು ಜಾರಿ ಸಂಸ್ಥೆಗಳ ಮೂಲಕ ನಡೆಸಲಾದ ಬೆದರಿಕೆ ಕೃತ್ಯವಾಗಿವೆ ಎಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಟೀಕಿಸಿದೆ.
ಇಂತಹ ದಾಳಿಗಳು ಸರಕಾರವನ್ನು ಟೀಕಿಸುವ ಮಾಧ್ಯಮಗಳಿಗೆ ಬೆದರಿಕೆಯನ್ನೊಡ್ಡುವ ಉದ್ದೇಶವನ್ನು ಹೊಂದಿವೆ ಎಂದು ಹೇಳಿರುವ ಅಮೆರಿಕದ ಮಾಧ್ಯಮ ಸಂಘಟನೆ ‘ದಿ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್’, ಪತ್ರಿಕಾ ಸ್ವಾತಂತ್ರದ ತನ್ನ ದೀರ್ಘಕಾಲಿಕ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವಂತೆ ಮತ್ತು ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಕುರಿತು ಮುಕ್ತ ವರದಿಗಾರಿಕೆಗೆ ಪತ್ರಕರ್ತರಿಗೆ ಅವಕಾಶ ನೀಡುವಂತೆ ಭಾರತವನ್ನು ಆಗ್ರಹಿಸಿದೆ.







