ದಿಲ್ಲಿ ಹಿಂಸಾಚಾರ ಪ್ರಕರಣ: ಕೇಂದ್ರ ಸರಕಾರ, ಪೊಲೀಸ್ ಗೆ ಹೈಕೋರ್ಟ್ ನೋಟಿಸ್

ಹೊಸದಿಲ್ಲಿ, ಜು.23: ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಪಿತೂರಿ ಹೂಡಿದ್ದ ಆರೋಪದಲ್ಲಿ ತನ್ನ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ತಾಹಿರ್ ಹುಸೇನ್ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸೂಚಿಸಿ ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರ, ದಿಲ್ಲಿ ಸರಕಾರ ಹಾಗೂ ನಗರ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.
ಯುಎಪಿಎ(ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ) ಕಾಯ್ದೆಯ ಸೆಕ್ಷನ್ 13,16,17 ಮತ್ತು 18ರಡಿ ಪ್ರಕರಣ ದಾಖಲಿಸಲು ಪರಿಶೀಲನಾ ಸಮಿತಿ ಅನುಮತಿ ನೀಡಿರುವುದನ್ನು ರದ್ದುಗೊಳಿಸಬೇಕೆಂದು ತಾಹಿರ್ ಹುಸೇನ್ ಅರ್ಜಿಯಲ್ಲಿ ಕೋರಿದ್ದರು. ಈ ಪ್ರಕರಣವಲ್ಲದೆ, ದಿಲ್ಲಿ ಪೊಲೀಸರು ಸಲ್ಲಿಸಿರುವ ಇತರ 10 ಎಫ್ಐಆರ್ಗಳಲ್ಲೂ ಹುಸೇನ್ ಹೆಸರಿದೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ದಾಖಲಿಸಿರುವ ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈಶಾನ್ಯ ದಿಲ್ಲಿ ಗಲಭೆ ಮತ್ತು ಹಿಂಸಾಚಾರಕ್ಕೆ ಸಂಭವಿಸಿ 750ಕ್ಕೂ ಅಧಿಕ ಪ್ರಕರಣ ಹಾಗೂ 250ಕ್ಕೂ ಅಧಿಕ ಆರೋಪಪಟ್ಟಿ ದಾಖಲಿಸಲಾಗಿದೆ.





