ಭಾರತದ ಡಿಎನ್ಎ ದತ್ತಾಂಶ ಕಾನೂನಿನಿಂದ ಅಲ್ಪಸಂಖ್ಯಾತರಿಗೆ, ಖಾಸಗಿತನಕ್ಕೆ ಹಾನಿ ಸಾಧ್ಯತೆ: ತಜ್ಞರು
ಹೊಸದಿಲ್ಲಿ, ಜು. 23: ಅಪರಾಧ ನಿಯಂತ್ರಿಸಲು ವಂಶವಾಹಿ ದತ್ತಾಂಶ (ಜೆನೆಟಿಕ್ ಡಾಟಾ) ಸಂಗ್ರಹಿಸುವ ಹಾಗೂ ಬಳಸುವ ಕುರಿತ ಪ್ರಸ್ತಾವಿತ ಭಾರತೀಯ ಕಾನೂನು ಖಾಸಗಿತನವನ್ನು ಉಲ್ಲಂಘಿಸುವ ಹಾಗೂ ಅಲ್ಪಸಂಖ್ಯಾತರು, ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಗೆ ದೊಡ್ಡ ಪ್ರಮಾಣದಲ್ಲಿ ತೊಂದರೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ತಂತ್ರಜ್ಞಾನ ತಜ್ಞರು ಹಾಗೂ ಮಾನವ ಹಕ್ಕು ಗುಂಪುಗಳು ಆತಂಕ ವ್ಯಕ್ತಪಡಿಸಿವೆ.
ಅಪರಾಧ ಸಂತ್ರಸ್ತರ, ಆರೋಪಿಗಳ, ನಾಪತ್ತೆಯಾದವರ ವಿವರ ಸಂಗ್ರಹಿಸಲು ಹಾಗೂ ಅವರ ಡಿಎನ್ಎ ಮಾಹಿತಿಯನ್ನು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಡಾಟಾ ಬ್ಯಾಂಕ್ನಲ್ಲಿ ಸಂಗ್ರಹಿಸಲು ಈ ಡಿಎನ್ಎ ತಂತ್ರಜ್ಞಾನ ನಿಯಂತ್ರಣ ಮಸೂದೆ ಅವಕಾಶ ನೀಡುತ್ತದೆ. ಡಿಎನ್ಎ ನಿಯಂತ್ರಣ ಮಂಡಳಿ ಆರಂಭಿಸುವ ಉದ್ದೇಶವನ್ನು ಕೂಡ ಈ ಕಾಯ್ದೆ ಹೊಂದಿದೆ. ಈ ಮಸೂದೆಯನ್ನು ಕಳೆದ ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿತ್ತು.
ಆಗಸ್ಟ್ 31ರ ವರೆಗೆ ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ ಈ ಮಸೂದೆ ಅಂಗೀಕಾರವಾಗುವ ನಿರೀಕ್ಷೆ ಇದೆ. ದೇಶದಲ್ಲಿ ಜಾತಿ ಹಾಗೂ ಸಮುದಾಯ ಆಧರಿತ ವಿವರಗಳ ದತ್ತಾಂಶ ದುರ್ಬಳಕೆಯಾಗುವ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ದೊಡ್ಡ ಪ್ರಮಾಣದಲ್ಲಿ ಅಪರಾಧೀಕರಣಕ್ಕೆ ಒಳಗಾಗುವ ಸಾಧ್ಯತೆ ಇದೆ. ಅಲ್ಲದೆ, ವೈಯುಕ್ತಿಕ ದತ್ತಾಂಶ ರಕ್ಷಿಸಲು ಯಾವುದೇ ಕಾನೂನು ಇಲ್ಲದೇ ಇರುವುದರಿಂದ ಖಾಸಗಿತನದ ಹಕ್ಕು ಉಲ್ಲಂಘನೆಯಾಗುವ ಸಾಧ್ಯತೆ ಇದೆ ಎಂದು ಖಾಸಗಿತನ ಹಕ್ಕು ಪ್ರತಿಪಾದಕರು ಹೇಳಿದ್ದಾರೆ.
‘‘ಈ ಮಸೂದೆ ವಿವಿದೋದ್ದೇಶಗಳ ಡಾಟಾ ಬ್ಯಾಂಕ್ನ ಮುಖ್ಯ ಸಂಸ್ಥೆಯನ್ನು ರೂಪಿಸುತ್ತದೆ. ಆದರೆ, ಇಲ್ಲಿ ಯಾವ ದತ್ತಾಂಶವನ್ನು ಸಂಗ್ರಹಿಸಿ ಇರಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆಯ ಕೊರತೆ ಇರುವುದು ಕಳವಳಕಾರಿ’’ ಎಂದು ತಕ್ಷಶಿಲಾ ಇನ್ಸ್ಟಿಟ್ಯೂಷನ್ಸ್ ತಂತ್ರಜ್ಞಾನ ಹಾಗೂ ನೀತಿ ಕಾರ್ಯಕ್ರಮದ ಸಂಶೋಧಕಿ ಶಾಂಭವಿ ನಾಕ್ ತಿಳಿಸಿದ್ದಾರೆ. ಒಬ್ಬರ ಸಂಬಂಧಿಕರು ಹಾಗೂ ಪೂರ್ವಜರ ಕುರಿತು ಕೂಡ ಡಿಎನ್ಎ ಬಹಿರಂಗ ಪಡಿಸುವುದರಿಂದ ಇಲ್ಲಿ ಖಾಸಗಿತನದ ಕುರಿತು ಆತಂಕ ಇದೆ ಎಂದು ಅವರು ಹೇಳಿದ್ದಾರೆ.







