ಎಜಿಆರ್ ಬಾಕಿ: ಏರ್ಟೆಲ್, ವೊಡಾಫೋನ್, ಟಾಟಾ ಅರ್ಜಿಗಳಿಗೆ ಸುಪ್ರೀಂ ತಿರಸ್ಕಾರ
ಹೊಸದಿಲ್ಲಿ,ಜು.23: ಸರಕಾರಕ್ಕೆ ತಾವು ಬಾಕಿಯಿರಿಸಿರುವ ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ(ಎಜಿಆರ್)ದ ಮರುಲೆಕ್ಕಾಚಾರವನ್ನು ಕೋರಿ ಏರ್ಟೆಲ್,ವೊಡಾಫೋನ್ ಮತ್ತು ಟಾಟಾ ಟೆಲಿಸರ್ವಿಸಿಸ್ ಸಲ್ಲಿಸಿದ್ದ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದೆ. ಎಲ್ಲ ಅರ್ಜಿಗಳನ್ನೂ ವಜಾಗೊಳಿಸಲಾಗಿದೆ ಎಂದು ನ್ಯಾ.ಎಲ್.ನಾಗೇಶ್ವರ ರಾವ್ ನೇತೃತ್ವದ ಪೀಠವು ಹೇಳಿತು.
ದೂರಸಂಪರ್ಕ ಕಂಪನಿಗಳಿಂದ ಬರಬೇಕಿರುವ ಮೊತ್ತದ ಲೆಕ್ಕಾಚಾರಕ್ಕಾಗಿ ಕೇಂದ್ರವು ಆಧಾರವಾಗಿಟ್ಟುಕೊಂಡಿರುವ ಆದಾಯದ ವಿಶಾಲ ವ್ಯಾಖ್ಯೆಯನ್ನು ಸರ್ವೋಚ್ಚ ನ್ಯಾಯಾಲಯವು ಅಕ್ಟೋಬರ್ 2019ರಲ್ಲಿ ಎತ್ತಿಹಿಡಿದಿತ್ತು. 15 ಕಂಪನಿಗಳು ಸರಕಾರಕ್ಕೆ ಬಾಕಿಯಿರಿಸಿರುವ 1.47 ಲ.ಕೋ.ರೂ.ಗಳಲ್ಲಿ 92,642 ಕೋ.ರೂ.ಪಾವತಿಯಾಗದ ಪರವಾನಿಗೆ ಶುಲ್ಕವಾಗಿದ್ದರೆ, 55,054 ಕೋ.ರೂ. ಬಾಕಿಯಿರುವ ಸ್ಪೆಕ್ಟ್ರಂ ಬಳಕೆ ಶುಲ್ಕವಾಗಿದೆ. ವೊಡಾಫೋನ್ ಸರಕಾರಕ್ಕೆ ಗರಿಷ್ಠ ಮೊತ್ತ (58,000 ಕೋ.ರೂ.)ವನ್ನು ಬಾಕಿಯಿರಿಸಿದ್ದು, ಭಾರತಿ ಏರ್ಟೆಲ್ ಮತ್ತು ಟಾಟಾ ಟೆಲಿ ಸರ್ವಿಸಸ್ ನಂತರದ ಸ್ಥಾನಗಳಲ್ಲಿವೆ.
ಕೇಂದ್ರ ಸರಕಾರಕ್ಕೆ ತಮ್ಮ ಎಜಿಆರ್ ಬಾಕಿಯನ್ನು ತೀರಿಸಲು ಸರ್ವೋಚ್ಚ ನ್ಯಾಯಾಲಯವು ಸೆಪ್ಟೆಂಬರ್ 2020ರಲ್ಲಿ ದೂರಸಂಪರ್ಕ ಕಂಪನಿಗಳಿಗೆ 10 ವರ್ಷಗಳ ಕಾಲಾವಕಾಶ ನೀಡಿದ್ದು,ಪ್ರತಿ ವರ್ಷ ಶೇ.10ರಷ್ಟು ಮೊತ್ತ ಪಾವತಿಸುವಂತೆ ಸೂಚಿಸಿತ್ತು. ಮೊದಲ ಕಂತಿನ ಪಾವತಿಗೆ 2021,ಮಾ.31 ಅಂತಿಮ ಗಡುವು ಆಗಿತ್ತು. ದೂರಸಂಪರ್ಕ ಇಲಾಖೆಯು ಎಜಿಆರ್ ಬಾಕಿಯನ್ನು ಲೆಕ್ಕ ಹಾಕುವಲ್ಲಿ ತಪ್ಪುಗಳನ್ನು ಮಾಡಿದೆ ಎಂದು ದೂರಿ ಈ ಮೂರೂ ಕಂಪನಿಗಳು 2020ರಲ್ಲಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದವು.





