ಮೂರನೇ ಏಕದಿನ: ಭಾರತ ವಿರುದ್ಧ ಶ್ರೀಲಂಕಾ ಜಯಭೇರಿ
ಅವಿಷ್ಕ ಫೆರ್ನಾಂಡೊ, ಭಾನುಕ ರಾಜಪಕ್ಸ ಅರ್ಧಶತಕ
ಕೊಲಂಬೊ: ಮಳೆಬಾಧಿತ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಅವಿಷ್ಕ ಫೆರ್ನಾಂಡೊ(76) ಹಾಗೂ ಭಾನುಕ ರಾಜಪಕ್ಸ(65) ಅರ್ಧಶತಕಗಳ ಕೊಡುಗೆಯ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡ ಭಾರತ ವಿರುದ್ಧ 3 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಶುಕ್ರವಾರ ಗೆಲ್ಲಲು 47 ಓವರ್ ಗಳಲ್ಲಿ 227 ರನ್ ಸವಾಲು ಬೆನ್ನಟ್ಟಿರುವ ಶ್ರೀಲಂಕಾ 39 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಆದಾಗ್ಯೂ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿದೆ. ಭಾರತವು ಮೊದಲೆರಡು ಪಂದ್ಯಗಳನ್ನು ಜಯಿಸಿ ಈಗಾಗಲೇ ಸರಣಿ ವಶಪಡಿಸಿಕೊಂಡಿದೆ.
76 ರನ್ (98 ಎಸೆತ, 4 ಬೌಂಡರಿ, 1 ಸಿ.) ಗಳಿಸಿರುವ ಅವಿಷ್ಕ ಫೆರ್ನಾಂಡೊ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ್ದಾರೆ. ಭಾನುಕ ರಾಜಪಕ್ಸ(65, 56ಎಸೆತ) ಅರ್ಧಶತಕದ ಕೊಡುಗೆ ನೀಡಿದರು. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು 47 ಓವರ್‌ಗೆ ಸೀಮಿತಗೊಳಿಸಲಾಯಿತು.ಭಾರತದ ಪರ ರಾಹುಲ್ ಚಹಾರ್(3-54)ಯಶಸ್ವಿ ಬೌಲರ್ ಎನಿಸಿಕೊಂಡರು. ಚೇತನ್ ಸಕಾರಿಯಾ(2-34) ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಮಾಡಿದ್ದ ಭಾರತವು 43.1 ಓವರ್‌ಗಳಲ್ಲಿ 225 ರನ್ ಗಳಿಸಿ ಆಲೌಟಾಯಿತು. ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ(49, 49 ಎಸೆತ) ಸರ್ವಾಧಿಕ ಸ್ಕೋರ್ ಗಳಿಸಿದರು. ಸಂಜು ಸ್ಯಾಮ್ಸನ್(49), ಸೂರ್ಯಕುಮಾರ್ ಯಾದವ್(40) ಒಂದಷ್ಟು ಹೋರಾಟ ನೀಡಿದರು. ಲಂಕೆಯ ಪರವಾಗಿ ಅಕಿಲ ದನಂಜಯ(3-44) ಹಾಗೂ ಪ್ರವೀಣ್ ಜಯವಿಕ್ರಮ(3-59) ತಲಾ 3 ವಿಕೆಟ್ ಗಳನ್ನು ಪಡೆದರು.