'ಮಹಾ’ಮಳೆಯ ಅಬ್ಬರ: 90ಕ್ಕೂ ಹೆಚ್ಚು ಮಂದಿ ಮೃತ್ಯು

ಮುಂಬೈ: ಮಹಾರಾಷ್ಟ್ರದಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಭೂಕುಸಿತ ಪ್ರಕರಣಗಳು ವರದಿಯಾಗಿವೆ. 90ಕ್ಕೂ ಹೆಚ್ಚು ಮಂದಿ ಮಳೆ ಸಂಬಂಧಿ ದುರಂತಗಳಲ್ಲಿ ಜೀವ ಕಳೆದುಕೊಂಡಿದ್ದು, ಇತರ 70 ಮಂದಿ ನಾಪತ್ತೆಯಾಗಿದ್ದಾರೆ.
ಅತ್ಯಂತ ಹಾನಿಗೀಡಾಗಿರುವ ರಾಯಗಢ ಜಿಲ್ಲೆಯೊಂದರಲ್ಲೇ ಮೂರು ಭೂಕುಸಿತ ಪ್ರಕರಣಗಳಲ್ಲಿ 60 ಮಂದಿ ಬಲಿಯಾಗಿದ್ದಾರೆ. ಮಹದ್ ತಾಲೂಕಿನ ತಲ್ಲಿಯೆ ಗ್ರಾಮದಲ್ಲಿ 49 ಮಂದಿ ಜೀವ ಕಳೆದುಕೊಂಡಿದ್ದಾರೆ.
ಕುಸಿತದ ಅವಶೇಷಗಳಲ್ಲಿ ಕನಿಷ್ಠ 47 ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ದುರಂತದ ಸ್ಥಳಕ್ಕೆ ಪರಿಹಾರ ಪಡೆ ತಲುಪುವಲ್ಲಿ ವಿಳಂಬವಾಗಿದ್ದು, ಯಾವುದೇ ಅಧಿಕೃತ ಮುನ್ಸೂಚನೆ ನೀಡಿರಲಿಲ್ಲ ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ. ಆದರೆ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದರೂ, ಅವರೆಲ್ಲ ವಾಪಾಸು ಬಂದದ್ದು ದುರಂತದ ತೀವ್ರತೆಗೆ ಕಾರಣ ಎಂದು ಸರ್ಕಾರ ಹೇಳಿಕೊಂಡಿದೆ.
ರಾಯಗಢ ದುರಂತದಲ್ಲಿ ಜೀವ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರ ಹೆಚ್ಚುವರಿ ರಕ್ಷಣಾ ಪಡೆಗಳ ನೆರವು ಕೋರಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜತೆ ಮಾತನಾಡಿದ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ರಕ್ಷಣಾ ಪಡೆಯ ನೆರವು ಕೋರಿದ್ದಾರೆ. ಗೃಹಸಚಿವ ಅಮಿತ್ ಶಾ, ಸಿಎಂ ಉದ್ಧವ್ ಠಾಕ್ರೆ ಜತೆ ಮಾತನಾಡಿ ಎಲ್ಲ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.
ರಾಜ್ಯದ ವಿವಿಧೆಡೆಗಳಲ್ಲಿ ಗುರುವಾರದಿಂದ ಸಂಭವಿಸಿದ 11 ಭೂಕುಸಿತ ಪ್ರಕರಣಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ರೂ. ನೆರವನ್ನು ಸಿಎಂ ಘೋಷಿಸಿದ್ದಾರೆ.







