ಒಲಿಂಪಿಕ್ಸ್: ಭಾರತದ ಶೂಟರ್ಗಳಿಗೆ ನಿರಾಸೆ
ಪುರುಷರ ಹಾಕಿಯಲ್ಲಿ ಭಾರತಕ್ಕೆ ನ್ಯೂಝಿಲೆಂಡ್ ವಿರುದ್ಧ ಜಯ

ಇಳವನಿಲ್ - ಅಪೂರ್ವಿ (PTI Photo)
ಟೋಕಿಯೊ : ಬಹುನಿರೀಕ್ಷೆಯ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಶೂಟರ್ಗಳು ಮೊದಲ ದಿನ ನಿರಾಸೆ ಅನುಭವಿಸಿದರು. ಮೊದಲ ಬಾರಿ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುತ್ತಿರುವ ಇಳವನಿಲ್ ವಲರಿವನ್ ಮತ್ತು ಅಪೂರ್ವಿ ಚಾಂಡೇಲ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಫೈನಲ್ಗೆ ಅರ್ಹತೆ ಪಡೆಯಲು ವಿಫಲರಾದರು. ಆದರೆ ಪುರುಷರ ಹಾಕಿಯಲ್ಲಿ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧ 1-0 ಗೋಲುಗಳ ಜಯದೊಂದಿಗೆ ಶುಭಾರಂಭ ಮಾಡಿದೆ.
ಅಸಾಕ ರೇಂಜ್ನಲ್ಲಿ ನಡೆದ ಸ್ಪರ್ಧೆಯಲ್ಲಿ 10 ಶಾಟ್ಗಳ ಆರು ಸರಣಿಯಲ್ಲಿ ಒಟ್ಟು 626.5 ಅಂಕಗಳನ್ನು ಪಡೆದ ಇಳವನಿಲ್ 16ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಆದರೆ ಅನುಭವಿ ಶೂಟರ್ ಅಪೂರ್ವಿ ಚಾಂಡೇಲ 621.8 ಅಂಕಗಳೊಂದಿಗೆ 36ನೇ ಸ್ಥಾನಕ್ಕೆ ಕುಸಿದರು.
ಭಾರತದ ಶೂಟರ್ಗಳು ಉತ್ತಮವಾಗಿ ಆರಂಭಿಸಿದರೂ, ಅಪೂರ್ವಿ ಆ ಬಳಿಕ ಕುಸಿದರು. 21 ವರ್ಷದ ಇಳವನಿಲ್ ಗರಿಷ್ಠ 10.9 ಅಂಕ ಸೇರಿದಂತೆ ಮೂರನೇ ಸೀರೀಸ್ನಲ್ಲಿ ಉತ್ತಮ ಸಾಧನೆಯೊಂದಿಗೆ ಸ್ಪರ್ಧೆಯಲ್ಲಿ ಉಳಿದರು. ಆದಾಗ್ಯೂ ಐದನೇ ಮತ್ತು ಆರನೇ ಸರಣಿಯಲ್ಲಿ ಇದೇ ಫಾರ್ಮ್ ಪ್ರದರ್ಶಿಸಲು ಸಾಧ್ಯವಾಗದ ಇಳವನಿಲ್ ಆ ಬಳಿಕ ಕುಸಿದರು. 2016ರ ರಿಯೊ ಒಲಿಂಪಿಕ್ಸ್ನಲ್ಲಿ ಅಪೂರ್ವಿ 34ನೇ ಸ್ಥಾನ ಗಳಿಸಿದ್ದರು.
ನಾರ್ವೆಯ ಜೆನೆಟ್ ಹೇಗ್ ಡ್ಯೂಸ್ಟಡ್ ಒಲಿಂಪಿಕ್ಸ್ ಅರ್ಹತಾ ದಾಖಲೆ ಎನಿಸಿದ 632.9 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದರೆ, ದಕ್ಷಿಣ ಕೊರಿಯಾದ ಹೀಮೂನ್ ಪಾಕ್ 631.7 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಅಮೆರಿಕದ ಸ್ಪರ್ಧಿ ಮೇರಿ ಕಾರ್ಲೋನ್ ಟ್ಯೂಕೆರ್ 631.4 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು.







