ಲಸಿಕೆ ಅಭಿಯಾನಕ್ಕೆ ಇದುವರೆಗೆ ತಗುಲಿದ ವೆಚ್ಚವೆಷ್ಟು ಗೊತ್ತೇ ?

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಲಸಿಕೆ ಖರೀದಿ, ಲಸಿಕೆ ನೀಡಿಕೆ ಕಾರ್ಯಾಚರಣೇ ವೆಚ್ಚ ಸೇರಿದಂತೆ ಲಸಿಕಾ ಅಭಿಯಾನಕ್ಕೆ 9,275 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಶುಕ್ರವಾರ ಮಾಹಿತಿ ನೀಡಿದೆ.
ಲಸಿಕೆ ಡೋಸ್‌ಗಳ ಖರೀದಿಯಲ್ಲಿ ವಿಳಂಬವಾಗಿಲ್ಲ ಎಂದು ಸರ್ಕಾರ ಸಮರ್ಥಿಸಿಕೊಂಡಿದ್ದು, ಆಗಸ್ಟ್‌ನಿಂದ ಡಿಸೆಂಬರ್ ಅವಧಿಯಲ್ಲಿ ಒಟ್ಟು 135 ಕೋಟಿ ಲಸಿಕಾ ಡೋಸ್‌ಗಳನ್ನು ಖರೀದಿಸಲು ಉದ್ದೇಶಿಸಿದೆ ಎಂದು ಅರೋಗ್ಯ ಖಾತೆ ರಾಜ್ಯ ಸಚಿವ ಭಾರ್ತಿ ಪ್ರವೀಣ್ ಪವಾರ್ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಟಿಎಂಸಿಯ ಮಾಲಾ ರಾಯ್ ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ವಿವರಿಸಿದ್ದಾರೆ.
2021ರ ಆಗಸ್ಟ್‌ನಿಂದ ಡಿಸೆಂಬರ್ ಅವಧಿಯಲ್ಲಿ ಒಟ್ಟು 135 ಕೋಟಿ ಡೋಸ್‌ಗಳು ಲಭ್ಯವಾಗುವ ನಿರೀಕ್ಷೆ ಇದೆ. ದೇಶೀಯ ಲಸಿಕೆ ಉತ್ಪಾದನಾ ಕಂಪನಿಗಳ ಜತೆ ಖರೀದಿ ಒಪ್ಪಂದ ಮಾಡಿಕೊಳ್ಳುವಲ್ಲಿ ಯಾವುದೇ ವಿಳಂಬವಾಗಿಲ್ಲ. ಪೂರೈಕೆ ಕಾರ್ಯಾದೇಶ ನೀಡುವ ವೇಳೆಗೆ ಮುಂಗಡ ಪಾವತಿಯನ್ನೂ ಮಾಡಲಾಗಿದೆ ಎಂದು ಹೇಳಿದರು. ಲಸಿಕೆ ಅಭಿಯಾನ ಪೂರ್ಣಗೊಳಿಸಲು ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಆದರೆ ಡಿಸೆಂಬರ್ ಒಳಗಾಗಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಇದುವರೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 43.9 ಕೋಟಿ ಲಸಿಕಾ ಡೋಸ್‌ಗಳನ್ನು ಪೂರೈಸಲಾಗಿದ್ದು, 71.4 ಲಕ್ಷ ಡೋಸ್‌ಗಳು ಸರಬರಾಜು ಹಂತದಲ್ಲಿವೆ. ದೇಶದಲ್ಲಿ ಶುಕ್ರವಾರ 42.7 ಲಕ್ಷ ಡೋಸ್‌ಗಳನ್ನು ನೀಡಲಾಗಿದೆ ಎಂದು ಅಂಕಿ ಅಂಶ ನೀಡಿದರು.







