ಮಾಂಸ ನಿಷೇಧ ಮೂಲಭೂತ ಹಕ್ಕಿಗೆ ಸಂಬಂಧಿಸಿದ ವಿಚಾರ: ಉತ್ತರಾಖಂಡ ಹೈಕೋರ್ಟ್

ನೈನಿತಾಲ್: ಶೇಕಡ 70ಕ್ಕಿಂತಲೂ ಅಧಿಕ ಮಂದಿ ಮಾಂಸಾಹಾರ ಸೇವಿಸುತ್ತಿದ್ದು, ಇದರಿಂದ ಮಾಂಸ ನಿಷೇಧಿಸುವ ವಿಚಾರ ನಾಗರಿಕರ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ್ದಾಗುತ್ತದೆ, ಇದು ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಿನ ವಿಚಾರವಲ್ಲ ಎಂದು ಉತ್ತರಾಖಂಡ ಹೈಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.
ಹರಿದ್ವಾರದಲ್ಲಿ ವಧಾಲಯಗಳನ್ನು ನಿಷೇಧಿಸುವ ಕ್ರಮದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಮತ್ತು ನ್ಯಾಯಮೂರ್ತಿ ಅಲೋಕ್ ಕುಮಾರ್ ವರ್ಮಾ ಅವರನ್ನೊಳಗೊಂಡ ಪೀಠ, "ಇದು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಿನ ವ್ಯಾಜ್ಯವಲ್ಲ; ಸಮಸ್ಯೆ ತೀರಾ ಸರಳ. ಭಾರತದ ನಾಗರಿಕರ ಮೂಲಭೂತ ಹಕ್ಕುಗಳೇನು ?" ಎಂದು ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ಅರ್ಜಿಯಲ್ಲಿ ಸೂಕ್ತ ತಿದ್ದುಪಡಿ ಮಾಡುವಂತೆ ನ್ಯಾಯಪೀಠ ಅರ್ಜಿದಾರರಿಗೆ ಸಲಹೆ ಮಾಡಿತ್ತು. ವಧಾಲಯಗಳ ನಿಷೇಧ ನಾಗರಿಕರ ಖಾಸಗಿತನದ ಉಲ್ಲಂಘನೆ ಎಂಬ ವಿಚಾರವನ್ನು ಯಾವ ಅರ್ಜಿದಾರರೂ ಮನವಿಯಲ್ಲಿ ಪ್ರಸ್ತಾವಿಸಿಲ್ಲ. ಅರ್ಜಿಯ ಕರಡನ್ನು ಪೂರ್ಣಶ್ರದ್ಧೆಯಿಂದ ಸಿದ್ಧಪಡಿಸಿಲ್ಲ. ಗಂಭೀರ ಪರಿಣಾಮ ಬೀರಬಹುದಾದ ಸಂವಿಧಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಶ್ನಿಸುವ ಅರ್ಜಿಗಳಲ್ಲಿ ಇದು ಅಗತ್ಯ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಹರಿದ್ವಾರದಲ್ಲಿ ವಧಾಲಯಗಳನ್ನು ನಿಷೇಧಿಸಿರುವುದು ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯ ಎಂದು ಅರ್ಜಿದಾರರು ಹೇಳಿದ್ದರು.
2018 ಮತ್ತು 2019ರ ಆಹಾರ ಹವ್ಯಾಸ ಸಮೀಕ್ಷೆಯನ್ನು ಉಲ್ಲೇಖಿಸಿದ ನ್ಯಾಯಪೀಠ, "ಉತ್ತರಾಖಂಡದಲ್ಲಿ ಶೇಕಡ 72.6ರಷ್ಟು ಮಂದಿ ಮಾಂಸಾಹಾರಿಗಳು. ದೇಶದಲ್ಲಿ ಒಟ್ಟಾರೆ 70% ಮಂದಿ ಮಾಂಸಾಹಾರಿಗಳಿದ್ದು, ಬಹುತೇಕ ಭಾರತೀಯರು ಸಸ್ಯಾಹಾರಿ ಗಳು ಎಂಬ ನಂಬಿಕೆಯನ್ನು ಇದು ಅಲ್ಲಗಳೆದಿದೆ" ಎಂದು ಹೇಳಿತು.







