ಟೋಕಿಯೊ ಒಲಿಂಪಿಕ್ಸ್: ಸಿಂಗಲ್ಸ್ ಟೆನಿಸ್ ಪಂದ್ಯ ಗೆದ್ದ ಭಾರತದ ಮೂರನೇ ಆಟಗಾರ ಸುಮಿತ್ ನಾಗಲ್

ಟೋಕಿಯೊ: ಭಾರತದ ಸುಮಿತ್ ನಾಗಲ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ಸಿಂಗಲ್ಸ್ ಟೆನಿಸ್ ಪಂದ್ಯವನ್ನು ಗೆದ್ದ ಮೂರನೇ ಭಾರತೀಯ ಹಾಗೂ 25 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಶನಿವಾರ ಪಾತ್ರರಾದರು.
ಸುಮಿತ್ ಅವರು ಎರಡು ಗಂಟೆ 34 ನಿಮಿಷಗಳಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಡೆನಿಸ್ ಇಸ್ಟೊಮಿನ್ ಅವರನ್ನು 6-4 6-7 (6) 6-4ರಿಂದ ಸೋಲಿಸಿ ಉತ್ತಮ ಸಾಧನೆ ಮಾಡಿದರು.
ಸುಮಿತ್ ಎರಡನೇ ಸುತ್ತಿನಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಡೇನಿಯಲ್ ಮೆಡ್ವೆಡೆವ್ ಅವರನ್ನು ಎದುರಿಸಲಿದ್ದಾರೆ. ಝೀಶನ್ ಅಲಿ ಅವರು 1988 ರ ಸಿಯೋಲ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪರಾಗ್ವೆಯ ವಿಕ್ಟೋ ಕ್ಯಾಬಲೆರೊ ಅವರನ್ನು ಸೋಲಿಸಿದಾಗ ಒಲಿಂಪಿಕ್ಸ್ ನಲ್ಲಿ ಸಿಂಗಲ್ಸ್ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ಎನಿಸಿಕೊಂಡಿದ್ದರು. ಆ ನಂತರ, ಲೆಜೆಂಡ್ ಆಟಗಾರ ಲಿಯಾಂಡರ್ ಪೇಸ್ 1996 ರ ಅಟ್ಲಾಂಟಾ ಕ್ರೀಡಾಕೂಟದಲ್ಲಿ ಐತಿಹಾಸಿಕ ಪುರುಷರ ಸಿಂಗಲ್ಸ್ ನಲ್ಲಿ ಕಂಚು ಗೆದ್ದರು. ಬ್ರೆಝಿಲ್ ನ ಫರ್ನಾಂಡೊ ಮೆಲಿಜೆನಿ ಅವರನ್ನು ಪೇಸ್ ಸೋಲಿಸಿದ್ದರು.
2012 ರ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೋಮದೇವ್ ದೇವ್ ವರ್ಮನ್ ಹಾಗೂ ವಿಷ್ಣು ವರ್ಧನ್ ಸ್ಪರ್ಧಿಸಿದ್ದರೂ ಕೂಡ ಯಾವುದೇ ಭಾರತೀಯರಿಗೆ ಸಿಂಗಲ್ಸ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಮೊದಲ ಸುತ್ತಿನ ಗಡಿ ದಾಟಲು ಅವರು ವಿಫಲರಾಗಿದ್ದರು.